ಶಿಕ್ಷಣ ಕ್ಷೇತ್ರಕ್ಕೆ ಶ್ರೀ ಮಠಗಳ ಕೊಡುಗೆ ಅಪಾರ : ಡಿಸಿಎಂ ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

ಆದಿಚುಂಚನಗಿರಿ, ಫೆ.20-ಕರ್ನಾಟಕದಲ್ಲಿರುವ ಮಠಗಳು ಧರ್ಮಕ್ಷೇತ್ರದ ಜತೆಗೆ ಶಿಕ್ಷಣ ಕ್ಷೇತ್ರಕ್ಕೆ ಅಪರಿಮಿತ ಕೊಡುಗೆಯನ್ನು ನೀಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆರನೇ ವರ್ಷದ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ ಮತ್ತು ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಹಳಷ್ಟು ಮಠಗಳಿವೆ ಅವೆಲ್ಲವೂ ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಿವೆ. ಆದರೆ ರಾಜ್ಯದಲ್ಲಿರುವ ಮಠಗಳು ಧಾರ್ಮಿಕ ಕ್ಷೇತ್ರದ ಜತೆಗೆ ಶಿಕ್ಷಣ ಕ್ಷೇತ್ರದಲ್ಲೂ ಬಹಳಷ್ಟು ಕೊಡುಗೆ ನೀಡುತ್ತಿರುವುದು ಪ್ರಶಂಸನೀಯ ಎಂದರು.

ವಿಶೇಷವಾಗಿ ಶ್ರೀ ಆದಿಚುಂಚನಗಿರಿ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿ ಶ್ರೀಮಠದ ಕೀರ್ತಿಯನ್ನು ಹೆಚ್ಚು ವಿಸ್ತರಿಸಿರುವುದು ಶ್ಲಾಘನೀಯ ಎಂದರು.ಇಂದು ವಿಜ್ಞಾನ ಕ್ಷೇತ್ರದಲ್ಲಿ ನಾವು ಬಹಳಷ್ಟು ಸಾಧನೆ ಮಾಡಿದ್ದೇವೆ. ಆಧುನಿಕ ಜಗತ್ತಿನಲ್ಲಿ ಭಾರತ ಬಹುದೊಡ್ಡ ಸಾಧನೆ ಮಾಡಿದೆ.

ಇಡೀ ವಿಶ್ವದಲ್ಲಿ ಅಣುಶಕ್ತಿಯಲ್ಲಿ ಭಾರತ 5ನೇ ಸ್ಥಾನದಲ್ಲಿರುವುದು ಕಡಿಮೆಯೇನಲ್ಲ ಇಷ್ಟು ಸಾಧನೆ ಮಾಡಲು ನಮ್ಮ ದೇಶ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರೋತ್ಸಾಹ ಸ್ತುತ್ಯಾರ್ಹವಾಗಿದೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಶ್ರೀಮಠವು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ನೀಡುತ್ತಿರುವ ಕೊಡುಗೆ ಶ್ಲಾಘನೀಯ ಎಂದರು.ಇದೇ ಸಂದರ್ಭದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ವಿಜ್ಞಾನಿ ಡಾ. ಶರತ್‍ಚಂದ್ರ ಅವರಿಗೆ ಶ್ರೀಮಠದ ವತಿಯಿಂದ ಜ್ಞಾನ-ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ವಿಜ್ಞಾತಂ ಪ್ರಶಸ್ತಿಯನ್ನು ಕೊಡಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶರತ್‍ಚಂದ್ರ ಅವರು ದೇಶದ ಸಾಧಕರ ಸಾಲಿನಲ್ಲಿ ತಮ್ಮನ್ನು ಗುರುತಿಸಿ ಗೌರವಿಸಿದ ಶ್ರೀಮಠಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ಕಾಲಹರಣ ಮಾಡದೇ ಶಿಕ್ಷಣ ಕಲಿಯಬೇಕು. ಆತ್ಮಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಯೋಗಗುರು ಶ್ರೀ ಬಾಬಾ ರಾಮ್‍ದೇವ್, ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಶಿವಾನಂದ ಭಾರತೀ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ, ಸಂಸದ ಎಲ್.ಆರ್. ಶಿವರಾಮೇಗೌಡ, ಶಾಸಕ ಸುರೇಶ್‍ಗೌಡ, ಆದಿಚುಂಚನಗಿರಿ ಶಾಖಾ ಮಠದ ಶ್ರೀಗಳು, ಗಣ್ಯರು ಪಾಲ್ಗೊಂಡಿದ್ದರು.

Facebook Comments