ಗೃಹ ಸಚಿವರ ಹೊಸ ವರಸೆ, ಸಿಎಂಗೆ ತಲೆನೋವಾದ ಎಂ.ಬಿ.ಪಾಟೀಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮ್ಮ ಮಾತೇ ಅಂತಿಮ ಎಂದು ಮೌಖಿಕ ಆದೇಶ ನೀಡುವ ಮೂಲಕ ಗೃಹ ಸಚಿವ ಎಂ.ಬಿ.ಪಾಟೀಲ್ ಹೊಸ ವರಸೆ ತೆಗೆದಿದ್ದಾರೆ. ಈವರೆಗೂ ಡಿವೈಎಸ್‍ಪಿ ಹಾಗೂ ಐಪಿಎಸ್ ಮೇಲ್ಪಟ್ಟ ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯಮಂತ್ರಿಗಳೇ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಸಿದ್ದರಾಮಯ್ಯ ಅವರ ಸರ್ಕಾರದಲ್ಲೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿತ್ತು.

ಸಮ್ಮಿಶ್ರ ಸರ್ಕಾರದ ಆರಂಭದಲ್ಲಿ ಗೃಹ ಸಚಿವರಾಗಿದ್ದ ಪರಮೇಶ್ವರ್ ಕೂಡ ಹಿರಿಯ ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ತಕರಾರು ತೆಗೆಯದೆ ಸುಮ್ಮನಿರುತ್ತಿದ್ದರು. ಹಾಗಾಗಿಯೇ ಮೈಸೂರಿನ ಪೊಲೀಸ್ ಆಯುಕ್ತರ ವರ್ಗಾವಣೆ ವಿಷಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಸಮಾಧಾನಕ್ಕೂ ಕಾರಣವಾಗಿತ್ತು.

ಹೊಸದಾಗಿ ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ಅವರು ಕೆಳಹಂತದಿಂದ ಹಿರಿಯ ಅಧಿಕಾರಿಗಳ ವರ್ಗಾವಣೆಯಲ್ಲಿ ತಮ್ಮ ಮಾತೇ ಅಂತಿಮ. ತಮ್ಮ ಗಮನಕ್ಕೆ ತರದೆ ಯಾವುದೇ ವರ್ಗಾವಣೆ ಆದೇಶಗಳು ಜಾರಿಯಾಗಬಾರದು ಎಂದು ಗೃಹ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ಮೌಖಿಕ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಅವರನ್ನು ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಲೋಕೇಶ್‍ಕುಮಾರ್ ಅವರನ್ನು ನೇಮಿಸಲಾಗಿತ್ತು. ಬೆಳಗಾವಿ ಪೊಲೀಸ್ ಆಯುಕ್ತ ಡಿ.ಸಿ.ರಾಜಪ್ಪ ಅವರನ್ನು ವರ್ಗಾವಣೆ ಮಾಡಿ ರಾಜೇಂದ್ರ ಪ್ರಸಾದ್ ಅವರನ್ನು ನೇಮಿಸಲಾಗಿತ್ತು.

ಈವೆರಡೂ ವರ್ಗಾವಣೆಗೂ ಎಂ.ಬಿ.ಪಾಟೀಲ್ ತಡೆಯಾಜ್ಞೆ ನೀಡಿದ್ದಾರೆ. ಹಾಗಾಗಿ ಸಮ್ಮಿಶ್ರ ಸರ್ಕಾರದಲ್ಲಿ ಶೀತಲ ಸಮರ ಆರಂಭವಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗೃಹ ಸಚಿವರ ನಡವಳಿಕೆಗಳಿಂದ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಚುನಾವಣಾ ಆಯೋಗ ಇಂದಿನಿಂದ ಯಾವುದೇ ವರ್ಗಾವಣೆಗಳು ನಡೆಯುವಂತಿಲ್ಲ ಎಂದು ಈಗಾಗಲೇ ಕಟ್ಟಪ್ಪಣೆ ಮಾಡಿದೆ. ಈವರೆಗೂ ನಡೆದಿರುವ ವರ್ಗಾವಣೆಗಳಲ್ಲೂ ಆಯೋಗ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳಿವೆ.  ಬಿ.ಎಂ.ಪಾಟೀಲ್ ಅವರ ಧೋರಣೆಯಿಂದಾಗಿ ಲೋಕಸಭೆ ಚುನಾವಣೆಯ ನಂತರವೂ ಒಂದಷ್ಟು ಸಂಘರ್ಷ ನಡೆಯುವ ಸಾಧ್ಯತೆ ಎದುರಾಗಿದೆ. ಸಮನ್ವಯ ಸಮಿತಿಯಲ್ಲಿ ಚರ್ಚೆ ಮಾಡಿ ಹಿರಿಯ ಅಧಿಕಾರಿಗಳ ವರ್ಗಾವಣೆಯಾಗಬೇಕು ಎಂಬ ಒಪ್ಪಂದವಾಗಿತ್ತು. ಆದರೆ, ಅದನ್ನು ಮೀರಿ ಕುಮಾರಸ್ವಾಮಿ ಅವರು ಕೆಲವು ವರ್ಗಾವಣೆಗಳನ್ನು ಮಾಡಿದ್ದರು. ಮಾಡುತ್ತಲೇ ಇದ್ದಾರೆ. ಈಗ ಎಂ.ಬಿ.ಪಾಟೀಲ್ ಸೆಟೆದು ನಿಲ್ಲುವ ಮೂಲಕ ಮುಖ್ಯಮಂತ್ರಿಗೆ ಟಾಂಗ್ ನೀಡಿದ್ದಾರೆ.

ಇನ್ಸ್‍ಪೆಕ್ಟರ್‍ಗಿಂತ ಕೆಳ ಹಂತದ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ ನಾಯಕರ ಶಿಫಾರಸುಗಳಿಗೆ ಗೃಹ ಸಚಿವರು ಹೆಚ್ಚಿನ ಒತ್ತು ನೀಡುತ್ತಿರುವುದು ಜೆಡಿಎಸ್ ನಾಯಕರು ಹಾಗೂ ಶಾಸಕರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಆಪರೇಷನ್ ಕಮಲದಿಂದ ಎದುರಾಗಿದ್ದ ಕಂಟಕ ಸ್ವಲ್ಪ ಮಟ್ಟಿಗೆ ನಿವಾರಣೆಯಾಯಿತು ಎನ್ನುವ ಹಂತದಲ್ಲಿ ವರ್ಗಾವಣೆಯ ವ್ಯವಹಾರ ದೋಸ್ತಿಗಳ ನಡುವೆ ಮುನಿಸಾಟಕ್ಕೆ ಕಾರಣವಾಗಿದೆ.

Facebook Comments