ಮೇಕೆದಾಟು ವಿಚಾರಣೆಯನ್ನು 3 ವಾರಗಳ ಕಾಲ ಮುಂದೂಡಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.20 (ಪಿಟಿಐ)- ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾನೂನು ಸಂಘರ್ಷಕ್ಕೆ ಕಾರಣವಾಗಿರುವ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇಂದು ಮೂರು ವಾರಗಳ ಕಾಲ ಮುಂದೂಡಿದೆ.

ಕರ್ನಾಟಕದ ಮಹತ್ವಾಕಾಂಕ್ಷಿ ಮೇಕೆದಾಟು ಯೋಜನೆ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ವಿವರಗಳ ಕುರಿತು ಇಂದು ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.

ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸಲ್ಲಿಸಿರುವ ಉತ್ತರಗಳಿಗೆ ಸುಪ್ರೀಂಕೋರ್ಟ್ ಕರ್ನಾಟಕದಿಂದ ಪ್ರತ್ಯುತ್ತರ ಬಯಸಿತು.
ತಮಿಳುನಾಡು ಸಲ್ಲಿಸಿರುವ ಉತ್ತರಕ್ಕೆ ಪ್ರತ್ಯುತ್ತರ ನೀಡಲು ತನಗೆ ಕಾಲಾವಕಾಶ ನೀಡುವಂತೆ ಕರ್ನಾಟಕ ಮತ್ತು ಕೇರಳ ರಾಜ್ಯ ಮನವಿ ನ್ಯಾಯಾಲಯಕ್ಕೆ ಮನವಿ ಮಾಡಿತು.

ಇದಕ್ಕೆ ಅವಕಾಶ ನೀಡಿರುವ ಪೀಠವು ಮೂರು ವಾರದೊಳಗೆ ಉತ್ತರ ನೀಡುವಂತೆ ಉಭಯ ರಾಜ್ಯಗಳಿಗೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.

ಮೇಕೆದಾಟು ಯೋಜನೆಗೆ ಕೇಂದ್ರೀಯ ಜಲ ಆಯೋಗ(ಸಿಡಬ್ಲ್ಯುಸಿ) ಕರ್ನಾಟಕ್ಕೆ ಅನುಮತಿ ಹಾಗೂ ಯೋಜನೆ ಬಗ್ಗೆ ಸವಿವರ ಯೋಜನಾ ವರದಿ(ಡಿಪಿಆರ್) ಸಲ್ಲಿಸುವಂತೆ ಅವಕಾಶ ನೀಡಿರುವುದನ್ನು ಪ್ರತ್ನಿಸಿ ತಮಿಳುನಾಡು ಮತ್ತು ಪಾಂಡಿಚೇರಿ ಸರ್ಕಾರಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ.

ತಮಿಳುನಾಡು ಸರ್ಕಾರ ಈ ಸಂಬಂಧ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್, ನಾಲ್ಕು ವಾರಗಳ ಒಳಗೆ ವಿವರವಾದ ಅಫಿಡಾವಿಟ್ ಸಲ್ಲಿಸುವಂತೆ ಸೂಚಿಸಿತ್ತು. ಅದರಂತೆ ತಮಿಳುನಾಡು ಸರ್ಕಾರ ಸಲ್ಲಿಸುರುವ ಉತ್ತರಕ್ಕೆ ಕರ್ನಾಟಕದಿಂದ ಸುಪ್ರೀಂಕೋರ್ಟ್ ಪ್ರತ್ಯುತ್ತರ ಬಯಸಿದೆ. ಮೂರು ವಾರಗಳ ಬಳಿಕ ಈ ಪ್ರಕರಣದ ವಿಚಾರಣೆ ಮುಂದುವರಿಯಲಿದೆ.

Facebook Comments