ವೈಮಾನಿಕ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಉದ್ಯಮಿಗಳಿಗೆ ನಿರ್ಮಲಾ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

– ಬಿ.ಎಸ್.ರಾಮಚಂದ್ರ
ಬೆಂಗಳೂರು, ಫೆ.20-ಮೇಕ್ ಇನ್ ಇಂಡಿಯಾ ಅಭಿಯಾನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ವೈಮಾಂತರಿಕ್ಷ ಮತ್ತು ಅದಕ್ಕೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಅಧಿಕ ಬಂಡವಾಳ ಹೂಡುವಂತೆ ಉದ್ಯಮಿಗಳಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ.

ಯಲಹಂಕ ವಾಯು ನೆಲೆಯಲ್ಲಿ ಇಂದಿನಿಂದ ಆರಂಭವಾಗಿರುವ ಏಷ್ಯಾದ ಅತಿದೊಡ್ಡ ವಾಯು ಪ್ರದರ್ಶನ 12ನೇ ಏರೋ ಇಂಡಿಯಾ ಪ್ರದರ್ಶನಕ್ಕೆ ಇಂಡಿಯನ್ ಏರೋ ಸ್ಪೇಸ್ ಮೇಕಿಂಗ್ ಅಪ್ ಪುಸ್ತಕ ಬಿಡುಗಡೆ ಮಾಡುವ ಮೂಲಕ ಅವರು ಚಾಲನೆ ನೀಡಿ ಮಾತನಾಡಿದರು.

ರಕ್ಷಣಾ ಕ್ಷೇತ್ರದಲ್ಲಿ ಅಗತ್ಯ ಪರಿಕರಗಳ ತಯಾರಿಕೆಗಾಗಿ ಕೇಂದ್ರ ಸರ್ಕಾರ ಶೇ.100ರಷ್ಟು ವಿದೇಶ ನೇರ ಬಂಡವಾಳ ಹೂಡಿಕೆಗೆ ಅವಕಾಶ ಸೇರಿದಂತೆ ಅನೇಕ ಉತ್ತೇಜನಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.

ಭಾರತವು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಮರ ವಿಮಾನಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗೆ ಖಾಸಗಿ ಕ್ಷೇತ್ರಕ್ಕೆ ವಿಫುಲ ಅವಕಾಶ ನೀಡಿದೆ. ಅದನ್ನು ಬಳಸಿಕೊಳ್ಳಲು ಹೂಡಿಕೆದಾರರು ಮುಂದೆ ಬರಬೇಕೆಂದು ಅವರು ಸಲಹೆ ನೀಡಿದರು.

12ನೇ ಏರ್ ಶೋ ಈ ಬಾರಿಯೂ ಬೆಂಗಳೂರಿನಲ್ಲೇ ನಡೆಯುತ್ತಿರುವುದು ಸಂತಸದ ಸಂಗತಿ. 600 ಭಾರತೀಯ ಮತ್ತು 400 ವಿದೇಶಿ ಸಂಸ್ಥೆಗಳು ಈ ವಾಯು ಪ್ರದರ್ಶನದಲ್ಲಿ ಭಾಗವಹಿಸಿವೆ. ಇದೇ ಮೊದಲ ಬಾರಿಗೆ ನಾಗರಿಕ ವಿಮಾನಗಳು ಕೂಡ ಏರೋ ಇಂಡಿಯಾದಲ್ಲಿ ಪಾಲ್ಗೊಂಡಿವೆ ಎಂದು ತಿಳಿಸಿದರು.

ವಿಶ್ವದ ಮುಂಚೂಣಿ ರಾಷ್ಟ್ರಗಳೊಂದಿಗೆ ಸರಿಸಮನಾಗಿ ಭಾರತವು ಸ್ಪರ್ಧಿಸುವ ನಿಟ್ಟಿನಲ್ಲಿ ಏರ್‍ಶೋ ಮಹತ್ವದ್ದಾಗಿದೆ. ಮೇಕ್ ಇನ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಳಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಐಟಿ ವಲಯದ ಒಟ್ಟಾರೆ ಆದಾಯ ಮತ್ತು ಜಿಡಿಪಿಗೆ ಈ ಕ್ಷೇತ್ರ ಬಹುದೊಡ್ಡ ಕೊಡುಗೆ ನೀಡಿದೆ. ಅದರಲ್ಲೂ ಬೆಂಗಳೂರು ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ ಎಂದು ನಿರ್ಮಲಾ ಸೀತಾರಾಮನ್ ಬಣ್ಣಿಸಿದರು.

ವೈಮಾನಿಕ ಕ್ಷೇತ್ರ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿಶ್ವದರ್ಜೆಯ ಉತ್ಪನ್ನಗಳು ನಮ್ಮ ದೇಶದಿಂದ ತಯಾರಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಕ್ಷಣಾ ಇಲಾಖೆ 1,27,500 ಕೋಟಿ ರೂ. ಹಣವನ್ನು ಯುದ್ಧೋಪಕರಣಗಳನ್ನು ಖರೀದಿಸುವಿಕೆಗೆ ಖರ್ಚು ಮಾಡಿದೆ. ಬೇರೆ ಬೇರೆ ದೇಶಗಳಿಗಿಂತ ಹೆಚ್ಚು ಪ್ರಮಾಣದಲ್ಲಿ ನಮ್ಮ ದೇಶಕ್ಕೆ ಇಂತಹ ಉತ್ಪನ್ನಗಳ ತಯಾರಿಕೆಗೆ ಆದೇಶಗಳು ಸ್ವೀಕೃತವಾಗಿವೆ ಎಂದು ರಕ್ಷಣಾ ಸಚಿವರು ವಿವರಿಸಿದರು.

ಇದು ನಮ್ಮ ದೇಶದ ವಹಿವಾಟಿಗೆ ಬಹುದೊಡ್ಡ ಬೆಂಬಲ ನೀಡಿದೆ. ವಿದೇಶ ಹೂಡಿಕೆಗೆ ಶೇ.42ರಷ್ಟು ಅವಕಾಶವಿದೆ. ಉಳಿದ ಭಾಗವನ್ನು ಸರ್ಕಾರವೇ ನೀಡಲಿದೆ. ಇದಕ್ಕಾಗಿ 273 ಕೋಟಿ ರೂ. ವಿನಿಯೋಗಕ್ಕೆ ಅವಕಾಶವಿದ್ದು, ಈಗಾಗಲೇ 200 ಕೋಟಿ ರೂ.ಗಳು ಸದ್ಬಳಕೆಯಾಗಿದೆ ಎಂದು ಅವರು ತಿಳಿಸಿದರು.

ನಮ್ಮ ದೇಶದಲ್ಲಿ ತಯಾರಾಗುವ ಅನೇಕ ವಿಮಾನಗಳು, ವೈಮಾನಿಕ ಪರಿಕರಗಳು ನೇಪಾಳ, ಇಸ್ರೇಲ್, ರಷ್ಯಾ, ಮಾರಿಷಸ್ ಮೊದಲಾದ ದೇಶಗಳಿಗೆ ರಫ್ತಾಗುತ್ತಿವೆ ಎಂದು ಸಚಿವರು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಿಕೊಂಡರು.

Facebook Comments

Sri Raghav

Admin