‘ಭಯೋತ್ಪಾದನೆಗೆ ಪಾಕ್ ನರಮಂಡಲವಿದ್ದಂತೆ’

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.20- ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವ ತನ್ನ ತಂತ್ರವನ್ನು ನಿಲ್ಲಿಸಬೇಕು ಎಂದು ಭಾರತ ಮಂಗಳವಾರ ಆಗ್ರಹಿಸಿದೆ.

ಪುಲ್ವಾಮಾ ಭಯೋತ್ಪಾದಕ ದಾಳಿ ಕುರಿತ ತಮ್ಮ ಐದು ದಿನಗಳ ಮೌನದ ನಂತರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರೇಡಿಯೊ ಭಾಷಣ ಮಾಡಿದ್ದು, ಇದಕ್ಕೆ ಭಾರತ ಪ್ರತಿಕ್ರಿಯಿಸಿದ್ದು ಭಯೋತ್ಪಾದನೆಗೆ ಪಾಕಿಸ್ತಾನ ನರಮಂಡಲವಿದ್ದಂತೆ ಎಂದು ಹೇಳಿದೆ.

ಮುಂಬರುವ ಸಾರ್ವತ್ರಿಕ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಭಯೋತ್ಪಾದಕ ದಾಳಿ ಕುರಿತ ಭಾರತದ ಪ್ರತಿಕ್ರಿಯೆ ಪ್ರಚಾರದ ರೀತಿ ಇದೆ ಎಂಬ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ವಿಷಾದಕರ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುಳ್ಳು ಆರೋಪವನ್ನು ಭಾರತ ತಿರಸ್ಕರಿಸುತ್ತದೆ. ಭಾರತೀಯ ಪ್ರಜಾಪ್ರಭುತ್ವ ಇಡೀ ಜಗತ್ತಿಗೆ ಮಾದರಿಯಾಗಿದ್ದು, ಅದನ್ನು ಪಾಕಿಸ್ತಾನ ಆರ್ಥಮಾಡಕೊಳ್ಳಲು ಸಾಧ್ಯವೇ ಇಲ್ಲ, ಹೀಗಾಗಿ ಅಂತಾರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವುದನ್ನು ಪಾಕಿಸ್ತಾನ ಬಿಡಬೇಕು ಎಂಬುದು ನಮ್ಮ ಆಗ್ರಹ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಪುಲ್ವಾಮಾ ಭಯೋತ್ಪಾದಕ ದಾಳಿಯ ಸಂಚುಕೋರರು ಹಾಗೂ ತನ್ನ ನೆಲದಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ವಿಶ್ವಸಾರ್ಹ ಹಾಗೂ ಗೋಚರಿಸುವಂತಹ ಕ್ರಮ ಕೈಗೊಳ್ಳಬೇಕು ಎಂದು ಪಾಕಿಸ್ತಾನವನ್ನು ಒತ್ತಾಯಿಸಿದೆ.

Facebook Comments

Sri Raghav

Admin