ಪ್ರತಿಯೊಬ್ಬರಿಗೂ ವಿಮಾನಯಾನ ಸೇವೆ ಸಿಗುವಂತೆ ಮಾಡುವುದೇ ನಮ್ಮ ಗುರಿ : ಸುರೇಶ್‍ಪ್ರಭು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ದೇಶದ ಎಲ್ಲರಿಗೂ ವಿಮಾನಯಾನ ಸೇವೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ನಾವು ಗುರಿ ಹೊಂದಿದ್ದೇವೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್‍ಪ್ರಭು ತಿಳಿಸಿದ್ದಾರೆ.

ಯಲಹಂಕದ ವಾಯುನೆಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ನಡೆಯುವ ಏರೋ ಇಂಡಿಯಾ-2019 ವೈಮಾನಿಕ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಮಾನ ಸೇವೆಯನ್ನು ದೇಶಾದ್ಯಂತ ಸಂಪರ್ಕಿಸಲು ಈಗಾಗಲೇ 103 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ 10 ರಿಂದ 15 ವರ್ಷಕ್ಕೆ ಇದು ದುಪ್ಪಟ್ಟಾಗಲಿದೆ ಎಂದು ಹೇಳಿದರು.ಭಾರತಕ್ಕೆ ಈಗ 2000ಕ್ಕೂ ಹೆಚ್ಚು ನಾಗರಿಕ ಸೇವಾ ವಿಮಾನಗಳ ಆವಶ್ಯಕತೆಯಿದ್ದು, ಇದಕ್ಕಾಗಿ ಇಂತಹ ವೈಮಾನಿಕ ಸೇವಾ ಪ್ರದರ್ಶನ ಸಹಕಾರಿಯಾಗಲಿದೆ ಎಂದು ಹೇಳಿದರು.

ದೇಶದ ಟಯರ್-2, ಟಯರ್-3 ನಗರಗಳಿಗೆ ವಿಮಾನ ಸೇವೆ ಒದಗಿಸಲು ಆರಂಭಿಸಿದ ಉಡಾನ್ ಕಾರ್ಯಕ್ರಮ ಶರವೇಗದಲ್ಲಿ ಸಾಗುತ್ತಿದೆ. ಪ್ರಸ್ತುತ 235 ನಗರಗಳಿಗೆ ವಿಮಾನ ಸೇವೆ ಸಂಪರ್ಕದಲ್ಲಿದ್ದು, ಮುಂದಿನ ಕೆಲವೇ ದಿನಗಳಲ್ಲಿ ವಿಶ್ವದ ಅತಿದೊಡ್ಡ ವಿಮಾನಯಾನ ಸೇವೆ ಭಾರತದಲ್ಲಿರುತ್ತದೆ ಎಂದು ಸುರೇಶ್‍ಪ್ರಭು ಹೇಳಿದರು.

ಸರಕು-ಸಾಗಾಣಿಕೆ ಕ್ಷೇತ್ರದಲ್ಲೂ ಗಣನೀಯವಾಗಿ ಪ್ರಗತಿ ಕಾಣುತ್ತಿದ್ದು, ವಿಮಾನ ನಿಲ್ದಾಣಗಳ ಅಭಿವೃದ್ಧಿ ಹಾಗೂ ನೂತನ ನಿಲ್ದಾಣಗಳ ನಿರ್ಮಾಣಕ್ಕಾಗಿ 65 ಬಿಲಿಯನ್ ಡಾಲರ್ ಹೂಡಿಕೆ ಮಾಡಲಾಗುತ್ತದೆ ಎಂದರು. ವೈಮಾನಿಕ ಕ್ಷೇತ್ರದಲ್ಲಿನ ಇಂತಹ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಯೋಜನೆಗಳೇ ಸಹಕಾರಿಯಾಗುತ್ತಿವೆ ಎಂದರು.

Facebook Comments