ಬೆಂಗಳೂರಲ್ಲಿ ಮಹಿಳೆಯ ಕತ್ತು ಕೊಯ್ದು ಭೀಕರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20- ಸಿಲಿಕಾನ್ ಸಿಟಿಯಲ್ಲಿ ಮಹಿಳೆಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ರೇಣುಕಾ (31) ಎಂದು ಗುರುತಿಸಲಾಗಿದೆ.

ಗಾಂಧಿನಗರದ ಆರ್‍ಕೆ ಪುರಂನಲ್ಲಿ ರಸ್ತೆಯಲ್ಲಿ ಸೂರ್ಯ ನೆಸ್ಟ್ ಎಂಬ ಲಾಡ್ಜ್ ಇದ್ದು, ಫೆ.16ರಂದು ಈ ಲಾಡ್ಜ್‍ಗೆ ಮಹಿಳೆ ಹಾಗೂ ಪುರುಷ ಜತೆಯಾಗಿ ಬಂದು ದಂಪತಿ ಎಂದು ನಮೂದಿಸಿ ರೂಮ್ ಪಡೆದಿದ್ದಾರೆ.

ಶಂಕರಪ್ಪ-ರೇಣುಕಾ ಎಂದು ಹೆಸರು ಹೇಳಿ ಕೋಲಾರ ಮೂಲದವರೆಂದು ನಮೂದಿಸಿದ್ದಾರೆ. ನಿನ್ನೆ ಇವರು ಪಡೆದಿದ್ದ ರೂಮ್‍ನಿಂದ ವಾಸನೆ ಬರುತ್ತಿತ್ತು. ಹೊರಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಉಪ್ಪಾರಪೇಟೆ ಠಾಣೆ ಪೊಲೀಸರು ರೂಮ್‍ನ ಬೀಗ ಒಡೆದು ನೋಡಿದಾಗ ಮಹಿಳೆಯನ್ನು ಕತ್ತುಕೊಯ್ದು ಕೊಲೆ ಮಾಡಿರುವುದು ಕಂಡುಬಂದಿದೆ.

ಜತೆಯಲ್ಲಿ ಬಂದಿದ್ದ ವ್ಯಕ್ತಿ ಈ ಮಹಿಳೆಯನ್ನು ಕೊಲೆ ಮಾಡಿ ಮೈ ಮೇಲಿದ್ದ ಆಭರಣ ಗಳನ್ನು ತೆಗೆದು ಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ವಿಕ್ಟೋ ರಿಯಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಮಹಿಳೆ ಜತೆ ಬಂದಿದ್ದ ವ್ಯಕ್ತಿ ಈಕೆಯ ಪತಿಯೇ, ಕೋಲಾರ ಮೂಲದವರೇ ಅಥವಾ ಬೇರೆ ಊರಿನವರೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Facebook Comments