ನಿವೇಶನದ ಆಸೆಗಾಗಿ ನಾದಿನಿ ಮಾಡಿದ್ದ ಕೊಲೆ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.20-ನಿವೇಶನದ ಆಸೆಗಾಗಿ ನಾದಿನಿಯನ್ನು ಕೊಲೆ ಮಾಡಿದ್ದ ಆರೋಪಿಗಳಿಬ್ಬರನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆ.ಎಸ್.ಲೇಔಟ್ ಸನ್‍ಸಿಟಿ ನಿವಾಸಿ ವಿವೇಕ್‍ಪ್ರತಾಪ್ ಅಗರವಾಲ್(34) ಹಾಗೂ ಈತನಿಗೆ ಸಹಕರಿಸಿದ ಅರುಣಾಚಲ ಪ್ರದೇಶ ಮೂಲದ ಥಾಯ್‍ಹೇಲ್ (32) ಬಂಧಿತ ಆರೋಪಿಗಳು.

ಕೋಲ್ಕತ್ತಾ ಮೂಲದ ನಿವಾಸಿ ಯಾದ ವಿವೇಕ್ ಅಗರವಾಲ್ ಎಂಬಾತ ನೇತ್ರಾವತಿ ಎಂಬುವರನ್ನು ಮದುವೆಯಾಗಿದ್ದು, ಕೆಂಗೇರಿ ಉಪನಗರದಲ್ಲಿರುವ ಸನ್‍ಸಿಟಿಯಲ್ಲಿ ವಾಸವಾಗಿದ್ದನು. ಈತ ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡಿಕೊಂಡಿದ್ದು, ತನಗೆ ನಷ್ಟ ಉಂಟಾಗಿದ್ದರಿಂದ ಅತ್ತೆ ಕಡೆಯಿಂದ ಒಡವೆಗಳನ್ನು ಗಿರವಿ ಇರಿಸಿ ಹಣ ತೆಗೆದುಕೊಂಡಿದ್ದನಲ್ಲದೆ, ಮತ್ತೆ ಹಣಕ್ಕಾಗಿ ಪೀಡಿಸುತ್ತಿದ್ದನು.

ನಾದಿನಿ ಅನುಷಾ ಎಂಬುವರ ಹೆಸರಿನಲ್ಲಿ ಬಿಡದಿಯ ವಂಡರ್‍ಲಾ ಬಳಿ ನಿವೇಶನವಿದ್ದು, ಈ ಸೈಟನ್ನು ಪತ್ನಿ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿದ್ದನು. ಇದಕ್ಕೆ ನಾದಿನಿ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಈಕೆಯನ್ನು ಕೊಲೆ ಮಾಡಿದರೆ ಸೈಟ್ ಸಿಗುತ್ತದೆ ಎಂಬ ದುರುದ್ದೇಶದಿಂದ ಫೆ.15 ರಂದು ಕೊಮ್ಮಘಟ್ಟ ರಸ್ತೆಯಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್‍ಗೆ ತೆರಳಿದ್ದಾಗ ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಥಾಯ್‍ಹೇಲ್ ಎಂಬಾತನನ್ನು ಪರಿಚಯ ಮಾಡಿಕೊಂಡು ಸ್ವಲ್ಪ ಕೆಲಸವಿದೆ. ನನಗೆ ಸಹಾಯ ಮಾಡು, ನಿನಗೆ ಒಂದು ಲಕ್ಷ ಕೊಡುತ್ತೇನೆ ಎಂದು ಹೇಳಿ ಅವನಿಗೆ ಮದ್ಯಪಾನ ಮಾಡಿಸಿ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದನು.

ಮಾರನೆ ದಿನ ನಾದಿನಿ ಅನುಷಾ ವಾಸವಾಗಿದ್ದ ಕೆಂಗೇರಿ ಉಪನಗರದ ಸನ್‍ಸಿಟಿ 14ನೇ ಕ್ರಾಸ್‍ನ ಮನೆಯಲ್ಲಿ ಒಬ್ಬರೇ ಇರುವುದನ್ನು ಅರಿತ ಭಾವ ವಿವೇಕ್ ಪ್ರತಾಪ್, ಥಾಯ್‍ನನ್ನು ಕರೆದುಕೊಂಡು ಮನೆಗೆ ನುಗ್ಗಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ಕಿಟಕಿ ಮತ್ತು ಮನೆ ಬಾಗಿಲು ಹಾಕಿ, ಗೇಟ್‍ನ ಬೀಗ ಹಾಕಿಕೊಂಡು ಪರಾರಿಯಾಗಿದ್ದರು.

ಅಂದು ಅನುಷಾ ಅವರ ಪತಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಇದೇ ಕಟ್ಟಡದ ಮತ್ತೊಂದು ಮಹಡಿಯಲ್ಲಿ ವಾಸವಿದ್ದ ಆಕೆಯ ಅಕ್ಕನಿಗೆ ಕರೆ ಮಾಡಿ ನೋಡಲು ಹೇಳಿದಾಗ ಅನುಷಾ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿಗಳ ಪತ್ತೆಗಾಗಿ ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಕೊನೆಗೂ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Facebook Comments