ಈ ವಾರ ‘ಕದ್ದು ಮುಚ್ಚಿ’ ಬಿಡುಗಡೆ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ಗೆ ಮತ್ತೊಂದು ಪ್ರೇಮಮಯ ಚಿತ್ರ ಇದೇ ವಾರ ಬೆಳ್ಳಿ ಪರದೆ ಮೇಲೆ ಅಪ್ಪಳಿಸಲಿದೆ. ಕದ್ದುಮುಚ್ಚಿ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಯಾಗುತ್ತಿರುವ ಈ ಚಿತ್ರ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಾರಾಜಿಸಲಿದೆ.ಪ್ರೇಮಿಗಳಿಬ್ಬರ ನಡುವೆ ನಡೆಯುವ ಕಥೆಯೇ ಇಲ್ಲಿ ಪ್ರಮುಖವಾಗಿದೆ. ಆ ಪ್ರೇಮಿಗಳ ನಡುವೆ ಏನೇನೆಲ್ಲ ನಡೆಯುತ್ತೆ? ಅವರ ಭಾವನೆಗಳೇನು, ಅವರು ಬೆಳೆದುಬಂದ ವಾತಾವರಣ ಹೇಗಿತ್ತು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.

ವಸಂತರಾಜ್ ಅವರ ನಿರ್ದೇಶನದ ಈ ಚಿತ್ರ ಮಲೆನಾಡಿನಲ್ಲಿ ನಡೆಯುವ ಕಥಾನಕವಾಗಿದ್ದು, ಊಟಿ, ಶಿವಮೊಗ್ಗ, ತೀರ್ಥ್ಠಳ್ಳಿ, ಮಡಿಕೇರಿ ಸೋಮವಾರ ಪೇಟೆ ಸುತ್ತಮುತ್ತಲ ಸುಂದರ ಲೊಕೇಶನ್‍ಗಳಲ್ಲಿ ಚಿತ್ರೀಕರಣ ನಡಸಲಾಗಿದೆ. ಎಸ್.ಪಿ.ಬಾಲಸುಬ್ರಮಣ್ಯಂ ಅವರು ಈ ಚಿತ್ರದಲ್ಲಿ ಮದುವೆ ಸಂಭ್ರಮದ ಹಾಡೊಂದನ್ನು ಹಾಡಿದ್ದಾರೆ.

ಇನ್ನು ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಮಾಡಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ ಎಂದು ಮೊನ್ನೆ ನಡೆದ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ವಸಂತ್ ಹೇಳಿದರು.
ಚಿತ್ರದಲ್ಲಿ ನವಿರಾದ ಲವ್ ಸ್ಟೋರಿಯ ಜೊತೆಗೆ ಕಾಮಿಡಿಯನ್ನು ಪ್ಯಾರೆಲಲ್ ಆಗಿ ತೆಗೆದುಕೊಂಡು ಹೋಗಿದ್ದೇವೆ.

ಇದರ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಕೂಡ ಇದೆ, ಫ್ಯಾಮಿಲಿ ವ್ಯಾಲ್ಯೂಗಳಿಗೆ ಹೆಚ್ಚಿನ ಮಹತ್ವ ನೀಡಿ ಚಿತ್ರಕಥೆಯನ್ನು ರಚಿಸಲಾಗಿದೆ ಎಂದು ಕದ್ದು ಮುಚ್ಚಿ ಚಿತ್ರದ ನಿರ್ಮಾಪಕ ವಿ. ಜಿ. ಮಂಜುನಾಥ್ ಅವರು ಹೇಳಿದ್ದಾರೆ. ಕೂಡು ಕುಟುಂಬ, ಸಾಮರಸ್ಯದ ಅನುಭವವೇ ಇಲ್ಲದೆ ಮುಂದುವರಿಯುತ್ತಿರುವ ಈಗಿನ ಕಾಲದಲ್ಲಿ, ಕುಟುಂಬವಿಡೀ ಒಟ್ಟಿಗೆ ಕುಳಿತು ನೋಡುವಂಥ ಚಲನಚಿತ್ರಗಳನ್ನು ನಿರ್ಮಿಸುವ ಅಗತ್ಯವಿದೆ.

ನಾವು ಅದೇ ಆಶಯ ಇಟ್ಟುಕೊಂಡು ಕದ್ದುಮುಚ್ಚಿ ಚಿತ್ರವನ್ನು ನಿರ್ಮಿಸಿದ್ದೇವೆ.ಕದ್ದುಮುಚ್ಚಿ ಒಂದು ರಿಯಲ್ ಫ್ಯಾಮಿಲಿ ಎಂಟರ್‍ಟೇನರ್, ಹಣ ಕೊಟ್ಟು ಥಿಯೇಟರ್‍ಗೆ ಬರುವ ಪ್ರೇಕ್ಷಕನಿಗೆ ಖಂಡಿತ ಮನರಂಜನೆ ಸಿಗುತ್ತದೆ ಎಂಬ ಗ್ಯಾರಂಟಿಯನ್ನು ಚಿತ್ರತಂಡ ನೀಡಿದೆ.

ಕಿರುತೆರೆ ಮೂಲಕ ಅಪಾರ ಅಭಿಮಾನಿ ವರ್ಗವನ್ನು ಪಡೆದ ನಟ. ಅಗ್ನಿ ಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಎಂದೇ ಖ್ಯಾತರಾದ ವಿಜಯ್ ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮೇಘಶ್ರೀ ಈಗಾಗಲೇ ಕೃಷ್ಣ ರುಕ್ಮಿಣಿ ಸೇರಿ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಹಿರಿಯನಟ ದೊಡ್ಡಣ್ಣ, ಬಿ.ವಿ. ರಾಧಾ, ಸುಚೇಂದ್ರ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಚಿಕ್ಕಣ್ಣ, ರಾಜೇಶ್ ನಟರಂಗ, ಎಂ. ಎಸ್. ಉಮೇಶ್‍ರಂಥ ಸಾಕಷ್ಟು ಹಿರಿಯ ಕಲಾವಿದರ ದೊಡ್ಡ ಬಳಗವೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಕದ್ದುಮುಚ್ಚಿ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ
ತಿಳಿಯುತ್ತದೆ.

Facebook Comments