ನಾವಿಕನಿಲ್ಲದ ಹಡಗಿನಂತದ ಕೆಎಸ್‍ಎಫ್‍ಸಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.21- ನಾಡಿನ ಸಾವಿರಾರು ಉದ್ಯಮಿಗಳಿಗೆ ಉದ್ಯಮ ಆರಂಭಿಸಲು ಆರ್ಥಿಕ ನೆರವು ಒದಗಿಸಿ ರಾಜ್ಯದಲ್ಲೇ ಅತ್ಯಂತ ವಿಶ್ವಾಸರ್ಹ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ರಾಜ್ಯ ಹಣಕಾಸು ನಿಗಮ(ಕೆಎಸ್‍ಎಫ್‍ಸಿ) ನಾವಿಕನಿಲ್ಲದ ಹಡಗಿನಂತಾಗಿದೆ.

ವರ್ಷಕ್ಕೆ ಸಾವಿರಾರು ಕೋಟಿ ವಹಿವಾಟು ನಡೆಸುವ ಈ ಸಂಸ್ಥೆಗೆ ಪೂರ್ಣಾವಧಿಯ ಅಧಿಕಾರಿಯೊಬ್ಬರನ್ನು ನೇಮಿಸಲು ರಾಜ್ಯ ಸರ್ಕಾರ ಕಳೆದ ಹಲವು ವರ್ಷಗಳಿಂದ ಹಾವು-ಏಣಿ ಆಟ ಆಡುತ್ತಲೇ ಬಂದಿದೆ. ಪರಿಣಾಮ ಸಂಸ್ಥೆಯಲ್ಲಿ ನಿಗದಿತ ಸಮಯಕ್ಕೆ ಆಗಬೇಕಾದ ಪ್ರಮುಖ ಕೆಲಸ ಕಾರ್ಯಳು ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಸದ್ಯಕ್ಕೆ ಹಿರಿಯ ಐಎಎಸ್ ಅಧಿಕಾರಿ ಏಕ್‍ರೂಪ್ ಕೌರ್ ಅವರು ಕೆಎಸ್‍ಎಫ್‍ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರು ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಗಳಾಗಿರುವುದರಿಂದ ಏಕಕಾಲದಲ್ಲಿ ಎರಡು ಹುದ್ದೆಗಳನ್ನು ನಿಭಾಯಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಉದ್ಯಮಿಗಳನ್ನು ಕಾಡುತ್ತಿದೆ.

ಕಳೆದ ಎರಡು ವರ್ಷಗಳಿಂದ ಏಕ್‍ರೂಪ್ ಕೌರ್ ಅವರೇ ಕೆಎಸ್‍ಎಫ್‍ಸಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರೆದಿದ್ದಾರೆ. ಸರ್ಕಾರ ಇಂತಹ ಉನ್ನತ ಸಂಸ್ಥೆಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಕ ಮಾಡಲು ಏಕೆ ಮೀನಾಮೇಷ ಎಣಿಸುತ್ತದೆ ಎಂಬ ಪ್ರಶ್ನೆಯೂ ಎದ್ದಿದೆ.

ವ್ಯವಸ್ಥಾಪಕ ನಿರ್ದೇಶಕರ ಕೆಳಗೆ ಪ್ರಧಾನ ವ್ಯವಸ್ಥಾಪಕರು, ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು ಸೇರಿದಂತೆ ಮತ್ತಿತರ ಅಧಿಕಾರಿ ವರ್ಗ ಇರುತ್ತದೆ. ಆದರೆ ಪ್ರಮುಖ ತೀರ್ಮಾನಗಳು, ಸಾಲಕ್ಕೆ ಅನುಮೋದನೆ ನೀಡುವುದು, ನೀತಿ ನಿಯಮಗಳನ್ನು ಕೈಗೊಳ್ಳುವ ಅಧಿಕಾರ ಮಾತ್ರ ವ್ಯವಸ್ಥಾಪಕ ನಿರ್ದೇಶಕರಿಗೆ ಇರುತ್ತದೆ.

ಅಧಿಕಾರಿಗಳಿಗೆ ಬರವಿಲ್ಲ:
ರಾಜ್ಯದಲ್ಲಿ ಮುಖ್ಯ ಕಾರ್ಯದರ್ಶಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಹಾಯಕ ಆಯುಕ್ತರು ಸೇರಿದಂತೆ ಒಟ್ಟು 400ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಲ್ಲದೆ ಪ್ರತಿ ವರ್ಷ ನಿವೃತ್ತಿಯಾಗುತ್ತಿದ್ದಂತೆ ತೆರವಾಗಲಿರುವ ಸ್ಥಾನಕ್ಕೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಸಲ್ಲಿಸಿದ ಬೇಡಿಕೆಯಂತೆ ಅಧಿಕಾರಿಗಳನ್ನು ನೀಡುತ್ತದೆ. ಸರಿಸುಮಾರು 400ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ರಾಜ್ಯದಲ್ಲಿರುವಾಗ ಕೆಎಸ್‍ಎಫ್‍ಸಿಯಂತಹ ಸಂಸ್ಥೆಗೆ ಪೂರ್ಣಾವಧಿ ಅಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆಯೇ ಎಂದು ಉದ್ಯಮಿಗಳು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ಈ ಹಿಂದೆ ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಇದೇ ಪರಿಸ್ಥಿತಿ ಇತ್ತು. ಓರ್ವ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನಿಯೋಜಿಸಿದರೆ ಹೆಚ್ಚುವರಿಯಾಗಿ ಮತ್ತೊಂದು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಕೆಎಸ್‍ಎಫ್‍ಸಿಯಲ್ಲಿ ಸಣ್ಣ , ಅತಿಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮ ನಡೆಸುವ ಕೈಗಾರಿಕೋದ್ಯಮಿಗಳು, ವಾಪಾರಸ್ಥರು, ಆರ್ಥಿಕ ನೆರವು ಪಡೆಯಲು ಸಂಸ್ಥೆಯನ್ನು ನೆಚ್ಚಿಕೊಂಡಿರುತ್ತಾರೆ.

ಅಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನೇಕ ರೀತಿಯ ಯೋಜನೆಗಳು ಅನುಷ್ಠಾನವಾಗಬೇಕಾದರೆ ಪೂರ್ಣಾವಧಿಯ ಅಧಿಕಾರಿ ಇರಲೇಬೇಕಾಗುತ್ತದೆ. ಜೊತೆಗೆ ಫಲಾನುಭವಿಗಳಿಗೆ ಯೋಜನೆಗಳನ್ನು ಮನವರಿಕೆ ಮಾಡಿಕೊಡುವುದು ಕೆಳಹಂತದ ಅಧಿಕಾರಿಗಳಿಗಿಂತ ಹಿರಿಯ ಅಧಿಕಾರಿಗಳಿಗೆ ಸುಲಭ.

ಸದ್ಯಕ್ಕೆ ಏಕ್‍ರೂಪ್ ಕೌರ್ ಹಣಕಾಸು ಇಲಾಖೆ ಮತ್ತು ಕೆಎಸ್‍ಎಫ್‍ಸಿಯಲ್ಲಿ ಉನ್ನತ ಹುದ್ದೆಯಲ್ಲಿರುವುದರಿಂದ ಅವರು ಏಕಕಾಲಕ್ಕೆ ಎರಡು ಕಡೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರತೆ ಕಾಡುತ್ತಿದೆ. ಅಧಿಕಾರಿಗಳ ದಕ್ಷತೆ ಮತ್ತು ಪ್ರಾಮಾಣಿಕತೆಯ ಬಗ್ಗೆ ಉದ್ಯಮಿಗಳು ಪ್ರಶ್ನೆ ಮಾಡುತ್ತಿಲ್ಲ. ಕೆಎಸ್‍ಎಫ್‍ಸಿ ಎಷ್ಟು ಪ್ರಮುಖ ಸಂಸ್ಥೆಯೋ ಅದೇ ರೀತಿ ಹಣಕಾಸು ಇಲಾಖೆ ಕೂಡ ಅಷ್ಟೇ ಮುಖ್ಯವಾದುದು.

ಸಾವಿರಾರು ಕೋಟಿ ವಹಿವಾಟು ನಡೆಸುವ ಸಂಸ್ಥೆಗೆ ಈಗಲಾದರೂ ಪೂರ್ಣಾವಧಿಯ ಅಧಿಕಾರಿಯನ್ನು ನೇಮಿಸಬೇಕೆಂಬುದು ಬಹುತೇಕ ಉದ್ಯಮಿಗಳ ಒತ್ತಾಸೆಯಾಗಿದೆ. ಸರ್ಕಾರ ಈಗಲಾದರೂ ಕಣ್ತೆರಲಿದೆಯೇ ಎಂಬುದನ್ನು ಕಾದು ನೋಡಬೇಕು.

Facebook Comments