ಪಾಕ್ ಪ್ರಧಾನಿ ಇಮ್ರಾನ್ ಮುಖ ಮುಚ್ಚಿಕೊಳ್ಳುವಂತಹ ಪ್ರಶ್ನೆ ಕೇಳಿದ ಆರ್‌ಜಿವಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಫೆ.21-ಪುಲ್ವಾಮಾದಲ್ಲಿ 44 ಯೋಧರನ್ನು ಬಲಿ ತೆಗೆದುಕೊಂಡ ಭಯೋತ್ಪಾದಕರ ದಾಳಿ ಮತ್ತು ಆನಂತರ ಪಾಕಿಸ್ತಾನ ಪ್ರದಾನಿ ಇಮ್ರಾನ್‍ಖಾನ್ ನೀಡಿರುವ ಹೇಳಿಕೆ ಬಗ್ಗೆ ಭಾರತೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇದಕ್ಕೆ ಬಾಲಿವುಡ್ ಕೂಡ ಹೊರತಾಗಿಲ್ಲ.

ಬಿಟೌನ್‍ನ ಪ್ರತಿಭಾವಂತ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ ಆಗಾಗ ಟ್ವೀಟರ್‍ನಲ್ಲಿ ಹೇಳಿಕೆಗಳನ್ನು (ಕೆಲವೊಮ್ಮೆ ವಿವಾದಾತ್ಮಕ) ನೀಡುತ್ತಾ ಸುದ್ದಿಯಲ್ಲಿರುತ್ತಾರೆ.

ಈ ಬಾರಿ ಅವರು ಫಿಲ್ಮಿ ಶೈಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‍ಖಾನ್‍ಗೆ ಸರಿಯಾಗಿ ಬಿಸಿಮುಟ್ಟಿಸಿದ್ದಾರೆ.  ಪುಲ್ಮಾಮಾ ದಾಳಿ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ವಿಡಿಯೋ ಭಾಷಣ ಮಾಡಿದ್ದ ಇಮ್ರಾನ್, ಭಾರತ ಮತ್ತು ಪಾಕಿಸ್ತಾನ ನಡುವಣ ಸಮಸ್ಯೆಯನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆರ್‍ಜಿವಿ, ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರೇ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯದಿದ್ದರೆ ನೀವು ಮೂರು ಬಾರಿ ಮದುವೆಯಾಗುವ ಅಗತ್ಯವಿರಲಿಲ್ಲ ಎಂದು ಟ್ವೀಟರ್‍ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಮುಂದುವರೆದು ಟೀಕಿಸಿರುವ ವರ್ಮಾ, ಟನ್ನುಗಟ್ಟಲೆ ಆರ್‍ಡಿಎಕ್ಸ್ ಸ್ಫೋಟಕಗಳನ್ನು ಹೊಂದಿರುವ ನಿಮ್ಮ ಭಯೋತ್ಪಾದಕರ ಬಗ್ಗೆ ಹೇಗೆ ಮಾತನಾಡಬೇಕು ಎಂಬುದು ನಮಗೆ ಗೊತ್ತಿಲ್ಲ. ದಯವಿಟ್ಟು ನಮಗೆ ಅದನ್ನು ಹೇಳಿಕೊಡಿ.

ನಾವು ಭಾರತೀಯರು. ಇದಕ್ಕಾಗಿ ನಿಮಗೆ ಆ ಪಾಠದ ಶುಲ್ಕವನ್ನು ನೀಡುತ್ತೇವೆ ಎಂದು ಪಾಕಿಸ್ತಾನದ ಭಯೋತ್ಪಾದನೆ ಕುಕೃತ್ಯವನ್ನು ಛೇಡಿಸಿದ್ದಾರೆ. ಆರ್‍ಜಿವಿ ಅವರ ಈ ಪ್ರಶ್ನೆ ಮತ್ತು ಟ್ವೀಟ್ ದಾಳಿಗೆ ಬಾಲಿವುಡ್ ಖ್ಯಾತ ನಾಮರು ಮೆಚ್ಚುಗೆ ಸೂಚಿಸಿದ್ದಾರೆ.

Facebook Comments

Sri Raghav

Admin