ಮನೆಗಳ ಮುಂದೆಯೇ ಶವ ಸಂಸ್ಕಾರ, ಭಯಭೀತರಾದ ಜನರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.21-ಊರಿಗೊಂದು ಸ್ಮಶಾನ, ಏರಿಯಾಗೊಂದು ದೇವಸ್ಥಾನ ಅನ್ನೋ ವಾಡಿಕೆ ಇದೆ….. ಆದರೆ, ಬಿಬಿಎಂಪಿಗೆ ಸೇರಿರುವ ಈ ಪ್ರದೇಶದಲ್ಲಿ ಸ್ಮಶಾನವಿದ್ದರೂ ಕಂಡ ಕಂಡ ಮನೆಯವರ ಮುಂದೆ ಶವ ಸಂಸ್ಕಾರ ಮಾಡಿ ಕೆಲವರು ವಿಕೃತಿ ಮೆರೆಯುತ್ತಿದ್ದಾರೆ. ಹೊಸೂರುರೋಡ್‍ನ ಸಿಂಗಸಂದ್ರದಲ್ಲಿ ಈ ವಿಚಿತ್ರ ನಡೆಯುತ್ತಿದ್ದು, ಇಲ್ಲಿ ದೊಡ್ಡಮಟ್ಟದಲ್ಲಿ ಸ್ಮಶಾನ ಜಾಗವಿದೆ. ಆದರೂ ಸಹ ರಸ್ತೆಗೆಂದು ಮೀಸಲಿರುವ ಜಾಗದಲ್ಲೇ ಶವಗಳನ್ನು ಹೂತು ಹಾಕಲಾಗುತ್ತಿದೆ.

ಈ ಪ್ರದೇಶದಲ್ಲಿ ವಾಸವಿರುವ ಶ್ರೀನಿವಾಸರೆಡ್ಡಿ ಹಾಗೂ ಪಾಪರೆಡ್ಡಿ ಎಂಬುವರು ಸ್ಮಶಾನಕ್ಕಾಗಿ ಮೀಸಲಿಟ್ಟ ಜಾಗವನ್ನು ಬಿಟ್ಟು ಸಾರ್ವಜನಿಕ ರಸ್ತೆಗಳಲ್ಲಿ ಅವರ ತಂದೆ ಶಾಮಣ್ಣರೆಡ್ಡಿ ಅವರ ಶವವನ್ನು ಸಂಸ್ಕಾರ ಮಾಡಿದ್ದಾರೆ.ಇದಕ್ಕೆ ಸ್ಥಳೀಯ ಪಾಲಿಕೆ ಸದಸ್ಯರ ಬೆಂಬಲವಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ನಾಗರಾಜ್ ಅವರ ಮನೆಯ ಮುಂದಿರುವ ಗೇಟ್ ಎದುರುಗಡೆಯಲ್ಲೇ ಶವವನ್ನು ಹೂಳಲಾಗಿದ್ದು, ಇದರಿಂದ ನೆರೆಹೊರೆಯವರಿಗೂ ಕೂಡ ರಾತ್ರಿ ನಿದ್ದೆಬಾರದಂತಹ ಪರಿಸ್ಥಿತಿ ಎದುರಾಗಿದೆ.

ಇನ್ನು ಅತ್ತ ನೆಂಟರಿಸ್ಟರು ಬರುತ್ತಿಲ್ಲ, ಸ್ಥಳೀಯರಂತೂ ಆ ರಸ್ತೆಯಲ್ಲಿ ಓಡಾಡುವುದನ್ನೇ ಬಿಟ್ಟಿದ್ದಾರೆ. ಮಕ್ಕಳು ಸಹ ಆಟವಾಡಲು ಹೊರ ಹೋಗಲು ಭಯ ಪಡುವಂತಾಗಿದೆ. ಬಾಡಿಗೆಯವರು ಮನೆಗಳನ್ನು ಖಾಲಿ ಮಾಡಿಕೊಂಡು ಹೋಗಿದ್ದಾರೆ. ಆ ಮನೆಗಳಿಗೆ ಮತ್ಯಾರೂ ಸಹ ಬಾಡಿಗೆಗೆ ಬರುತ್ತಿಲ್ಲ ಎಂದು ಮನೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಇದರ ವಿರುದ್ಧ ಕ್ರಮಕೈಗೊಂಡು ನಿವಾಸಿಗಳು ನೆಮ್ಮದಿಯಿಂದ ಬದುಕಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ. ರಸ್ತೆಯಲ್ಲೇ ಶವಸಂಸ್ಕಾರ ಮಾಡುತ್ತಿದ್ದರೂ ಸಿಂಗಸಂದ್ರ ಪಾಲಿಕೆ ಸದಸ್ಯರಾದ ಶಾಂತಬಾಬು ಅವರು ನನಗೂ ಇದಕ್ಕೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Facebook Comments