ತಟ್ಟೇಲಿ ಹೆಗ್ಗಣ ಬಿದ್ದಿದ್ದರೂ ನೊಣದ ಬಗ್ಗೆ ಮಾತಾಡ್ತೀರಾ…?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.21- ನಿಮ್ಮ ತಟ್ಟೇಲಿ ಹೆಗ್ಗಣ ಬಿದ್ದಿದೆ… ಆದರೆ ನೀವು ನಮ್ಮ ತಟ್ಟೇಲಿ ಬಿದ್ದಿರೊ ನೊಣದ ಬಗ್ಗೆ ಮಾತಾಡ್ತೀರಾ… ಹೀಗೆಂದು ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸದಸ್ಯರನ್ನು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತರಾಟೆಗೆ ತೆಗೆದುಕೊಂಡರು.

ಪಾಲಿಕೆ ಸಭೆಯಲ್ಲಿಂದು ಮುಂದುವರಿದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ಆಸ್ತಿ ಮಾರಾಟ ಮಾಡಿದ್ದಾರೆ, ಅದಕ್ಕೆ ಹೊಣೆ ಯಾರು ಎಂಬುದು ಸಾಬೀತಾಗಬೇಕಾದರೆ 1989ರಿಂದ ಇಲ್ಲಿಯವರೆಗೂ ಆಡಳಿತ ನಡೆಸಿರುವುದರ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಸವಾಲು ಹಾಕಿದರು.

ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದವರು ಮಾಡಿದ್ದ ಸಾಲವನ್ನು ತೀರಿಸಲು ಬಿಜೆಪಿ ಆಡಳಿತದಲ್ಲಿ ಕೆಲವು ಆಸ್ತಿಗಳನ್ನು ಅಡಮಾನ ಇಡಲಾಯಿತು. ಈ ಆಸ್ತಿಗಳನ್ನು ಸಾಲ ತೀರಿಸಿದ ನಂತರ ಬಿಡಿಸಿಕೊಳ್ಳಬಹುದು.

ಆದರೆ ನೀವು ಹಾಕಿ ಸ್ಟೇಡಿಯಂ ಸಮೀಪ ಇರುವ ಕೋಟ್ಯಂತರ ಮೌಲ್ಯದ ದಿವ್ಯಶ್ರೀ ಛೇಂಬರ್‍ಅನ್ನು ಮಾರಾಟ ಮಾಡಿಬಿಟ್ಟಿದ್ದೀರಾ. ಈ ಆಸ್ತಿಯನ್ನು ಮತ್ತೆ ಪಾಲಿಕೆಗೆ ತರಲಾಗುತ್ತಾ ಎಂದು ಪ್ರಶ್ನಿಸಿದರು.

ಎಂಜಿ ರಸ್ತೆಯಲ್ಲಿರುವ ಮಹಾರಾಜ ಕಾಂಪ್ಲೆಕ್ಸ್, ಗರುಡಾಮಾಲ್ ಮತ್ತಿತರ ಪ್ರಮುಖ ಆಸ್ತಿಗಳನ್ನು ಮಾರಾಟ ಮಾಡಿದ್ದೀರಲ್ಲ, ಇದಕ್ಕೆ ಯಾರು ಹೊಣೆ ಎಂದರು. 2001ರಿಂದ 2008ರ ವರೆಗೆ ಮಾರುಕಟ್ಟೆ ಮತ್ತಿತರ ನೂರಾರು ಆಸ್ತಿ ಮಾರಾಟ ಮಾಡಿದ್ದೀರ. ಇದರಿಂದ ಪಾಲಿಕೆಗೆ ಕೇವಲ 49.80 ಲಕ್ಷ ರೂ. ಅಷ್ಟೇ ಬಂದಿದೆ. ಇದು ನಿಮ್ಮ ಆಡಳಿತಕ್ಕೆ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದರು.

ಹೀಗೆ ನಿಮ್ಮ ಆಡಳಿತದಲ್ಲಿ ಸಾವಿರಾರು ಕೋಟಿ ಆಸ್ತಿ ಮಾರಾಟ ಮಾಡಿದ್ದೀರಿ. ನಾವು ಸಾಲ ತೀರಿಸಲು ಆಸ್ತಿ ಅಡಮಾನ ಇಟ್ಟಿದ್ದಕ್ಕೆ ನಮ್ಮ ಮೇಲೆ ಆರೋಪ ಹೊರಿಸ್ತೀರ. ನಿಮ್ಮ ತಟ್ಟೇಲಿ ಬಿದ್ದ ಹೆಗ್ಗಣ ನೋಡಿಕೊಳ್ಳುವ ಬದಲು ನಮ್ಮ ತಟ್ಟೇಲಿ ಬಿದ್ದ ನೊಣದ ಬಗ್ಗೆ ಮಾತಾಡ್ತೀರ ಎಂದು ಛೀಮಾರಿ ಹಾಕಿದರು.

ನಿಮ್ಮ ಆಡಳಿತ ಹೇಗಿದೆ ಎಂಬುದನ್ನು ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಸರ್ಕಾರಕ್ಕೆ ಬಂರೆದಿರೋ ಪತ್ರಾನೆ ಉದಾಹರಣೆ. ಪಾಲಿಕೆಯಲ್ಲಿ ಅವಾಸ್ತವಿಕ ಬಜೆಟ್ ಮಂಡನೆ ಮಾಡ್ತಿರೋದ್ರಿಂದ ಹಣಕಾಸು ನಿರ್ವಹಣೆ ಸಾಧ್ಯವಾಗ್ತಿಲ್ಲ ಎಂದು ಪತ್ರ ಬರೆದಿದ್ದಾರೆ. ಇದು ನಿಮ್ಮ ಆಡಳಿತ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ಆಸ್ತಿ ಮಾರಾಟ, ಏನೇನು ಅವ್ಯವಹಾರ ಆಗಿದೆ ಎಂಬ ಬಗ್ಗೆ ಎರಡು ದಿನಗಳ ವಿಶೇಷ ಸಭೆ ನಡೆಸಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು. ನಗರದಲ್ಲಿರುವ ಶಾಲಾ-ಕಾಲೇಜು ಕಟ್ಟಡಗಳನ್ನು ಮತ್ತೆ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದಾಗಿ ಘೋಷಿಸಿದ್ದೀರಾ, ನಿಮ್ಮ ಕೈಲಿ ಶಾಲಾ-ಕಾಲೇಜು ಕಟ್ಟಡ ಮಾಲೀಕರಿಂದ ಶೇ.25ರಷ್ಟು ಸೇವಾಶುಲ್ಕ ವಸೂಲು ಮಾಡಲಾಗಿಲ್ಲ. ಅಂಥದ್ದರಲ್ಲಿ ಇವುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ತರಲಾಗುತ್ತದೆಯೇ ಎಂದು ಕಿಚಾಯಿಸಿದರು.

ಸಮರ್ಪಕವಾಗಿ ತೆರಿಗೆ ಕಟ್ಟದ ಎಷ್ಟು ಮಾಲೀಕರಿಗೆ ನೋಟಿಸ್ ಕೊಟ್ಟಿದ್ದೀರಿ? 350ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೇಗೆ ಮುಟ್ಟುತ್ತೀರ ಎಂದು ಪ್ರಶ್ನಿಸಿದರು. ಬೃಹತ್ ಕಟ್ಟಡಗಳವರು ವಂಚನೆ ಮಾಡಿದ್ದಾರೆ ಎಂದು ಟೋಟಲ್ ಸ್ಟೇಷನ್ ಸರ್ವೆ ಮಾಡಿಸ್ತಿದ್ದೀರ. ಈ ಕಾರ್ಯಕ್ಕೆ ಪ್ರತಿ ಬಜೆಟ್‍ನಲ್ಲಿ 5 ಕೋಟಿ ಮೀಸಲಿಡುತ್ತಿದ್ದೀರಾ, ಈ ಸರ್ವೆ ಮಾಡಿಸಿದ ಮೇಲೆ ನೀವು ಖರ್ಚು ಮಾಡಿದ ಹಣವನ್ನಾದರೂ ವಸೂಲಿ ಮಾಡಿದ್ದೀರಾ ಎಂದು ಕಿಡಿಕಾರಿದರು.

ಒಟ್ಟಾರೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತದಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರು ಕಳೆದ ಬಜೆಟ್ ಪ್ರತಿಯನ್ನೇ ನಕಲು ಮಾಡಿ ಈ ಬಾರಿ ಅವಾಸ್ತವಿಕ ಬಜೆಟ್ ಮಂಡಿಸುವ ಮೂಲಕ ನಗರದ ನಾಗರಿಕರನ್ನು ವಂಚಿಸಿದ್ದಾರೆ ಎಂದು ಪದ್ಮನಾಭರೆಡ್ಡಿ ವಾಗ್ದಾಳಿ ನಡೆಸಿದರು.

Facebook Comments