ಪುಲ್ವಾಮಗಿಂತಲೂ ಭೀಕರ ದಾಳಿಗೆ ಜೈಷ್ ಉಗ್ರರ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.21-ಜಮ್ಮು-ಕಾಶ್ಮೀರದ ಅವಂತಿಪೋರಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಳದ ಉಗ್ರರು ಪೈಶಾಚಿಕ ಕೃತ್ಯ ನಡೆಸಿರುವ ಘಟನೆ ಮಾಸುವ ಮುನ್ನವೇ ಅದಕ್ಕಿಂತಲೂ ಭೀಕರವಾದ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ.

ಇನ್ನೆರಡು ದಿನಗಳಲ್ಲಿ ಪಾಕ್‍ನ ಜೈಷ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಳದ ಉಗ್ರರು ಭಾರತದ ಸೇನಾಪಡೆ, ಸೇನಾಶಿಬಿರಗಳು ಸೇರಿದಂತೆ ಮತ್ತಿತರ ಕಡೆ ಪುಲ್ವಾಮಾ ದಾಳಿಗಿಂತಲೂ ಭೀಕರವಾಗಿ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ವಿಭಾಗ ಎಚ್ಚರಿಸಿದೆ.

ಜೈಷ್-ಎ-ಮೊಹಮ್ಮದ್ ಸಂಘಟನೆಯ ಮತ್ತೊಂದು ಮುಖವಾಡದಂತಿರುವ ತಂಜೀಮ್ ಎಂಬ ಉಗ್ರಗಾಮಿ ಸಂಘಟನೆ ಭಾರತದ ಮೇಲೆ ದಾಳಿ ನಡೆಸಲು ಕಣಿವೆ ರಾಜ್ಯದಲ್ಲಿ ಹೊಂಚು ಹಾಕಿ ಕುಳಿತಿದೆ. ಈ ಹಿನ್ನೆಲೆಯಲ್ಲಿ ಸೇನೆ ಕಟ್ಟೆಚ್ಚರ ವಹಿಸುವಂತೆ ಗುಪ್ತಚರ ವಿಭಾಗ ಸೂಚಿಸಿದೆ.ಜಮ್ಮು-ಕಾಶ್ಮೀರದ ಚೌಕಿಬಾಲ್ ಮತ್ತು ತಂಗಧರ್ ಮಾರ್ಗದಲ್ಲಿ ತಂಜೀಮ್ ಸಂಘಟನೆಯ ಆತ್ಮಾಹುತಿ ದಳದ ಉಗ್ರರು ಸುಧಾರಿತ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಲು ಸಜ್ಜಾಗಿದೆ ಎಂದು ಗುಪ್ತಚರ ವಿಭಾಗ ತಿಳಿಸಿದೆ.

ಸ್ಕಾರ್ಪಿಯೋದಲ್ಲಿ ದಾಳಿ ಸಂಭವ:
ಕಳೆದ ಗುರುವಾರ ಪುಲ್ವಾಮಾದ ಅವಂತಿಪೋರಾದಲ್ಲಿ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರ ಅದಿಲ್ ಅಹಮ್ಮದ್ ಯಾವ ರೀತಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದನೋ ಅದೇ ಮಾದರಿಯಲ್ಲೇ ತಂಜೀಮ್ ಆತ್ಮಾಹುತಿ ದಳದ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಪ್ರತಿ ವಾಹನದÀ ಚಲನವಲನಗಳ ಮೇಲೆ ಕಣ್ಣಿಡುವಂತೆ ಸೂಚನೆ ಕೊಡಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ಕಾಶ್ಮೀರಿಗಳ ಮೇಲೆ ದಬ್ಬಾಳಿಕೆಯನ್ನು ತಕ್ಷಣವೇ ನಿಲ್ಲಿಸಬೇಕು, ಪುಲ್ವಾಮಾದಲ್ಲಿ ನಾವು 200 ಕೆಜಿ ಸ್ಫೋಟಕಗಳನ್ನು ಬಳಸಿ ಸೇನಾ ವಾಹನದ ಮೇಲೆ ದಾಳಿ ನಡೆಸಿದ್ದೆವು. ಈಗ 500 ಕೆಜಿ ತೂಕದ ಸ್ಫೋಟಕ ಬಳಸಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಲು ಸಿದ್ಧ ಮಾಡಿಕೊಂಡಿರುವುದಾಗಿ ಸಂಘಟನೆ ಮುಖಂಡನೊಬ್ಬ ಹೇಳಿಕೊಂಡಿದ್ದಾನೆ.

ನಮ್ಮ ಮತ್ತು ನಿಮ್ಮ ನಡುವೆ ಯುದ್ಧ ನಡೆಯಲಿದೆ. ಸೈನಿಕರೇ ನೀವು ಬನ್ನಿ. ನಾವೂ ಸಜ್ಜಾಗಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಹರಿಬಿಟ್ಟಿದ್ದಾರೆ. ಇದು ಪ್ರಾರಂಭಿಕ ಮಾತ್ರ, ಮುಂದೆ ಇನ್ನಷ್ಟು ದಾಳಿಗಳು ನಡೆಯಲಿವೆ ಎಂದು ಎಚ್ಚರಿಸಲಾಗಿದೆ. ಮೂಲಗಳ ಪ್ರಕಾರ ಪುಲ್ವಾಮಾ ಘಟನೆ ನಂತರ ಪಾಕಿಸ್ತಾನದಿಂದ ಉಗ್ರರು ಒಳನುಸುಳುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಸದ್ಯಕ್ಕೆ 5 ರಿಂದ 6 ಉಗ್ರರು ಜಮ್ಮು-ಕಾಶ್ಮೀರದಲ್ಲಿ ರಕ್ತದೋಕುಳಿ ಹರಿಸಲು ಸಜ್ಜಾಗಿದ್ದಾರೆ. ಕೇವಲ ತಮ್ಮ ಸಂಘಟನೆಯ ಮುಖಂಡರ ಒಪ್ಪಿಗೆಗೆ ಕಾದು ಕುಳಿತಿದ್ದಾರೆ ಎನ್ನಲಾಗಿದೆ. ಕೆಲವು ಸ್ಥಳೀಯ ಯುವಕರೂ ಕೂಡ ಕೃತ್ಯದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಹೀಗಾಗಿ ಸೇನೆ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕೆಂದು ಗುಪ್ತಚರ ವಿಭಾಗ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.

Facebook Comments