ಕಾಶ್ಮೀರಕ್ಕೆ ನೀಡಿರುವ 371 ಕಾಯ್ದೆ ಅಳಿಸಿ ಹಾಕಿ : ಜಿಮ್ ರವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.21- ಕಾಶ್ಮೀರ ನಮ್ಮ ದೇಶದ ಮುಕುಟದಂತೆ. ಅಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕಬೇಕಾದರೆ ಪ್ರತಿಯೊಬ್ಬ ಭಾರತೀಯನೂ ಎಚ್ಚೆತ್ತುಕೊಳ್ಳುವ ಸಂದರ್ಭ ಎದುರಾಗಿದೆ.

370-371 ಎಂಬ ಕಾಯ್ದೆಯ ವಿಶೇಷ ಸ್ಥಾನಮಾನದ ನಿಯಮವನ್ನು ಅಳಿಸಿ ಹಾಕಬೇಕಿದೆ.  ಇಡೀ ದೇಶದಲ್ಲಿ ಒಂದೇ ಕಾನೂನು ಸಮಾನ ನಾಗರಿಕತ್ವ ಇರಬೇಕಾದುದು ಇಂದು ಅಗತ್ಯವಾಗಿದೆ.

ಹೀಗೆ ನಾವು ನಿರ್ಲಕ್ಷಿಸಿದರೆ ಮುಂದೆ ನಮಗೆ ದೊಡ್ಡ ಅಪಾಯ ಎದುರಾಗುತ್ತದೆ ಎಂಬುದರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಸಮಯ ಬಂದಿದೆ ಎಂದು ಅಂತಾರಾಷ್ಟ್ರೀಯ ದೇಹದಾಢ್ರ್ಯ ಪಟು ಹಾಗೂ ಆದಾಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಮ್ ರವಿ ಅವರ ಉದ್ಘಾರ.

ಇತ್ತೀಚೆಗೆ ಪುಲ್ವಾಮಾದಲ್ಲಿ ನಡೆದ ಸಿಆರ್‍ಪಿಎಫ್ ಯೋಧರ ಮೇಲಿನ ಆತ್ಮಾಹುತಿ ದಾಳಿ ತೀವ್ರ ನೋವಿನ ಸಂಗತಿ. ಇದರ ನಡುವೆ ದೇಶ ಕಾಯುವ ಯೋಧರು ಪಡುತ್ತಿರುವ ಸಂಕಷ್ಟಗಳು ಮತ್ತು ಪ್ರತಿ ಕ್ಷಣವೂ ಅವರು ಜೀವನವನ್ನೇ ಪಣಕ್ಕಿಟ್ಟು ಹೋರಾಡುವ ಪರಿಸ್ಥಿತಿಯನ್ನು ನಾವೆಲ್ಲರೂ ಗೌರವಿಸಬೇಕು, ಎಚ್ಚೆತ್ತುಕೊಳ್ಳಬೇಕು. ಇದು ಕೇವಲ ಕರೆಯಲ್ಲ. ಪ್ರತಿಯೊಬ್ಬ ನಾಗರಿಕನ ಕರ್ತವ್ಯ, ಜವಾಬ್ದಾರಿ.

ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ತಡೆಯಲು ಮತ್ತು ನೆರೆಯ ಪಾಕಿಸ್ತಾನದ ಪಾಪಿ ಕೃತ್ಯಗಳನ್ನು ಮಟ್ಟ ಹಾಕಲು ಮತ್ತು ನಮ್ಮ ದೇಶದ ಮೇಲೆ ನಡೆಸುತ್ತಿರುವ ಭಯೋತ್ಪಾದನಾ ಸಂಚುಗಳನ್ನು ಮಟ್ಟ ಹಾಕುವ ದಿಟ್ಟ ಎದೆಗಾರಿಕೆಯನ್ನು ಜನಪ್ರತಿನಿಧಿಗಳು ಪ್ರದರ್ಶಿಸಬೇಕಾಗಿದೆ.

371 ಸಂವಿಧಾನ ನಿಯಮವನ್ನೇ ಅಳಿಸಿ ಹಾಕುವುದು ಅಗತ್ಯವಾಗಿದೆ. ದೇಶಪ್ರೇಮದ ಕಿಚ್ಚು ಹೆಚ್ಚಬೇಕಿದೆ. ಭಾರತದ ವಿರುದ್ಧವೇ ತಿರುಗಿ ಬೀಳುವಂತಹ ಕೆಟ್ಟ ಮನಸ್ಸುಗಳನ್ನು ಶಿಕ್ಷಿಸಬೇಕಿದೆ. ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಇತಿ ಮಿತಿ ಮರೆತು ಪರಸ್ಪರ ಕೆಸರೆರಚಾಟ ಮಾಡಿಕೊಂಡು ಒಡಕು ಮೂಡಿಸುವಂತಹ ದನಿಗಳನ್ನು ಅಡಗಿಸಬೇಕಾಗಿದೆ ಎಂದು ರವಿ ಹೇಳಿದ್ದಾರೆ.

Facebook Comments