ಬ್ರೇಕಿಂಗ್ : ಕಂಬಿ ಹಿಂದೆ ಕಂಪ್ಲಿ ಗಣೇಶ್, 14 ದಿನ ನ್ಯಾಯಾಂಗ ಬಂಧನ..!

ಈ ಸುದ್ದಿಯನ್ನು ಶೇರ್ ಮಾಡಿ

ರಾಮನಗರ, ಫೆ.21-ಶಾಸಕ ಆನಂದ್‍ಸಿಂಗ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಗಣೇಶ್‍ಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಗುಜರಾತ್‍ನಲ್ಲಿ ಬಂಧಿಸಲಾದ ಗಣೇಶ್ ಅವರನ್ನು ಇಂದು ಮುಂಜಾನೆ ವಿಮಾನದ ಮೂಲಕ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.

ನಂತರ ರಸ್ತೆ ಮಾರ್ಗವಾಗಿ ಬಿಡದಿ ಪೊಲೀಸ್ ಠಾಣೆಗೆ ಭಾರೀ ಬಂದೋಬಸ್ತ್‍ನಲ್ಲಿ ಗಣೇಶ್ ಅವರನ್ನು ಕರೆದುಕೊಂಡು ಬರಲಾಯಿತು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಬಿಡದಿ ಪೊಲೀಸ್ ಠಾಣೆಯಲ್ಲಿ ಎರಡು ತಾಸುಗಳ ಕಾಲ ವಿಚಾರಣೆಗೊಳಪಡಿಸಿ ನಂತರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಶಾಸಕ ಗಣೇಶ್ ಪರವಾಗಿ ಹಿರಿಯ ವಕೀಲರಾದ ಹನುಮಂತರಾಯ ಅವರು ವಕಾಲತ್ತು ವಹಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಅನಿತಾ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.

ನಂತರ ಶಾಸಕ ಗಣೇಶ್ ಅವರನ್ನು ರಾಮನಗರದಿಂದ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಯಿತು. ಬಿಡದಿ ಸಮೀಪವಿರುವ ಈಗಲ್‍ಟನ್ ರೆಸಾರ್ಟ್‍ನಲ್ಲಿ ಶಾಸಕ ಆನಂದ್‍ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ್ ಅವರನ್ನು ಬಂಧಿಸಲಾಗಿದೆ.

Facebook Comments

Sri Raghav

Admin