‘ಹುಷಾರಾಗಿರಿ, ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ’ : ಎಂ.ಬಿ.ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಫೆ.21-ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ರಾಷ್ಟ್ರದ್ರೋಹಿ ಹೇಳಿಕೆ ಸಂದೇಶಗಳನ್ನು ಕಳುಹಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರದ್ರೋಹಿ ಹೇಳಿಕೆ ಸಂದೇಶ ಕಳುಹಿಸುವವರ ಕುರಿತು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಡಿಜಿ, ಐಜಿಗಳಿಗೆ ಸೂಚಿಸಲಾಗಿದೆ ಎಂದರು.

ಫೇಸ್‍ಬುಕ್, ವಾಟ್ಸ್‍ಅಪ್‍ನಲ್ಲಿ ಸಂದೇಶ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಕೂಡ ಇಂತಹ ಕೃತ್ಯಗಳನ್ನು ತಡೆಯಲು ಕಾಯ್ದೆ ರೂಪಿಸಬೇಕೆಂದು ಅವರು ಒತ್ತಾಯಿಸಿದರು. ಪಾಕಿಸ್ತಾನ ಭಯೋತ್ಪಾದನೆ ಬಿತ್ತುವ ರೋಗಗ್ರಸ್ಥ ರಾಷ್ಟ್ರವಾಗಿದ್ದು, ಆ ದೇಶವನ್ನು ವಿಶ್ವ ಮಟ್ಟದಲ್ಲಿ ಮೂಲೆಗುಂಪು ಮಾಡಬೇಕಿದೆ ಎಂದು ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಹುಬ್ಬಳ್ಳಿ ಸ್ಫೋಟಿಸುವುದಾಗಿ ಹೇಳಿರುವ ವೀಡಿಯೋ ವೈರಲ್ ಆಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೆ ಪೊಲೀಸರು ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.ಯೋಧರ ಪ್ರಾಣ ತ್ಯಾಗದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸೂಚ್ಯವಾಗಿ ಹೇಳಿದರು.

ಆನಂದ್‍ಸಿಂಗ್ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಕಂಪ್ಲಿ ಶಾಸಕ ಗಣೇಶ್ ಅವರನ್ನು ಗುಜರಾತ್‍ನಲ್ಲಿ ಬಂಧಿಸಲಾಗಿದ್ದು, ಬಿಡದಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆ ಎಂದರು.

Facebook Comments