ಈ ವಾರ ಥಿಯೇಟರ್ ಗಳಲ್ಲಿ ‘ಸ್ಟ್ರೈಕರ್’ ಆಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಈ ವಾರ ತನ್ನ ಸ್ಟ್ರೈಕರ್‍ಅನ್ನು ಬಿಡಲು ಬರುತ್ತಿದೆ ಯುವಕರ ತಂಡ. ಬಹುತೇಕ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಚಿತ್ರಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ ಎಂತಲೇ ಹೇಳಬಹುದು. ಈಗ ಅದೇ ಹಾದಿಯಲ್ಲಿ ಕುತೂಹಲಕಾರಿಯಾದಂತಹ ಕಥೆಯೊಂದು ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಸ್ಟ್ರೈಕರ್‍ಅನ್ನು ಪ್ರದರ್ಶಿಸಲಿದೆ.

ಸ್ಟ್ರೈಕರ್ ಎಂಬ ಹೆಸರಿನ ಈ ಚಿತ್ರ ಕುತೂಹಲಕರ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ. ಸಂದಿಗ್ಧ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನ ಭವಿಷ್ಯದಲ್ಲಿ ಒಳ್ಳೆಯದೂ ಆಗಬಹದು ಅಥವಾ ಕೆಟ್ಟದ್ದೂ ಆಗಬಹುದು. ಇದನ್ನೇ ಸ್ಟ್ರೈಕರ್ ಚಿತ್ರದ ಮೂಲಕ ನಿರ್ದೇಶಕ ಪವನ್ ತ್ರಿವಿಕ್ರಮ್ ಅವರು ಹೇಳಹೊರಟಿದ್ದಾರೆ.

ಈ ಚಿತ್ರದಲ್ಲಿ ಬರುವ ಕಥಾನಾಯಕ ಒಬ್ಬ ಅನಾಥ ಯುವಕ. ಅವನಿಗೆ ಬೇರೆ ಬೇರೆ ಥರದ ಕನಸುಗಳು ಬೀಳುತ್ತಿರುತ್ತವೆ. ಅದರಿಂದ ಆತನ ಮನಸ್ಸು ತೀರಾ ದುರ್ಬಲಗೊಂಡು ಮಾನಸಿಕ ಸ್ಥಿಮಿತ ಕಳೆದುಕೊಂಡಿರುತ್ತಾನೆ.

ಆತ ಮಾನಸಿಕ ಸಮಸ್ಯೆಯಿಂದ ಸೂಕ್ಷ್ಮ ಸಂವೇದನೆಯನ್ನು ಕಳೆದುಕೊಂಡಿರುತ್ತಾನೆ. ಇದರಿಂದ ಯಾಕೆ, ಹೇಗೆ ತಪ್ಪು ಮಾಡುತ್ತಾನೆ. ಹೊರಗಡೆ ಪೋಲಿಸರು ಈತನನ್ನು ಹೇಗೆ ಬಂಧಿಸುತ್ತಾರೆ ಎನ್ನುವುದೇ ಈ ಚಿತ್ರದ ಕಾಲ್ಪನಿಕ ಸಸ್ಪೆನ್ಸ್ , ಥ್ರಿಲ್ಲರ್ ಕಥೆಯ ಒಂದು ಎಳೆಯಾಗಿದೆ.

ನಟ ಪ್ರವೀಣ್ ತೇಜ್ ಈ ಚಿತ್ರದ ನಾಯಕ, ಒಬ್ಬ ಮೆಕ್ಯಾನಿಕಲ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನಾಯಕನಿಗೆ ಸಲಹೆ, ಪ್ರೋತ್ಸಾಹ ಕೊಡುವ ನಾಯಕಿಯ ಪಾತ್ರವನ್ನು ಶಿಲ್ಪ ಮಂಜುನಾಥ್ ಅವರು ನಿರ್ವಹಿಸಿದ್ದಾರೆ. ಭಜರಂಗಿ ಲೋಕೇಶ್ ಈ ಚಿತ್ರದಲ್ಲಿ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜಗಳ ಆಡುವವರನ್ನು ಸಂಧಾನ ಮಾಡಿಸುವ ಬದಲು ಇಬ್ಬರಿಗೂ ಪ್ರಚೋದನೆ ನೀಡಿ ಆ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದು ಯು ಟ್ಯೂಬ್‍ಗೆ ಹಾಕುವ ಧರ್ಮಣ್ಣ ಗ್ಯಾರೇಜ್‍ನಲ್ಲಿ ಸಹಾಯಕನ ಪಾತ್ರ ಮಾಡಿದ್ದಾರೆ. ಇವರದು ಚಿತ್ರದಲ್ಲಿ ಕಾಮಿಡಿ ಪಾತ್ರ. ಪವನ್ ವಿಕ್ರಮ್ ಈ ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಭರತ್ ಬಿ.ಜೆ. ಅವರ ಸಂಗೀತ, ರಾಕೇಶ್ ಎರುಕುಲ್ಲಾ ಅವರ ಛಾಯಗ್ರಹಣ ಈ ಚಿತ್ರಕ್ಕಿದೆ. ಜಿ.ಶಂಕರಪ್ಪ, ಸಿ.ರಮೇಶ್ ಬಾಬು ಮತ್ತು ಸಿ.ಸುರೇಶ್ ಬಾಬು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದೊಂದು ರೀತಿಯ ಕಳ್ಳ-ಪೊಲೀಸ್ ಕಥೆಯಾಗಿದ್ದರೂ ಲವ್ ಮತ್ತು ಕಾಮಿಡಿ ಈ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆಯಂತೆ.
ಈಗಾಗಲೇ ಈ ಚಿತ್ರದ ಟ್ರೈಲರ್ ಬಹಳಷ್ಟು ಕುತೂಹಲ ಹುಟ್ಟುಹಾಕಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸ್ಟ್ರೈಕರ್ ಯಾವ ರೀತಿ ತನ್ನ ಆಟ ಪ್ರದರ್ಶಿಸಲಿದೆ ಎಂಬುದನ್ನು ನೋಡಬೇಕು.

Striker

Facebook Comments