ಜೆಡಿಎಸ್’ನಿಂದ ಎಲೆಕ್ಷನ್ ಗೇಮ್ ಪ್ಲಾನ್, ಇಂದು ಸಂಜೆ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.22- ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಜೆಡಿಎಸ್ ಇಂದು ಸಂಜೆ ಪಕ್ಷದ ಪ್ರಮುಖ ಮುಖಂಡರ ಸಭೆ ನಡೆಸಲಿದೆ. ಜೆಡಿಎಸ್ ಕಚೇರಿ ಜೆಪಿಭವನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಲೋಕಸಭಾ ಕ್ಷೇತ್ರವಾರು ಮುಖಂಡರ ಸಭೆ ನಡೆಸಲಾಗುತ್ತಿದೆ.

ಆಯಾ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆ, ಅಭ್ಯರ್ಥಿಗಳ ಆಯ್ಕೆ, ಚುನಾವಣೆಯ ಕಾರ್ಯತಂತ್ರ ಮೊದಲಾದ ವಿಚಾರಗಳ ಬಗ್ಗೆ ಮುಖಂಡರೊಂದಿಗೆ ಗೌಡರು ಸಮಾಲೋಚನೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಪ್ರಮುಖ ಮುಖಂಡರ ಸಭೆಯನ್ನು ನಡೆಸಲಾಗುತ್ತದೆ.

ರಾತ್ರಿಯವರೆಗೂ ನಡೆಯುವ ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ ಬಗ್ಗೆ ಸಮಾಲೋಚನೆ ನಡೆಸಿ ಗೌಡರು ಪಕ್ಷದ ಮುಖಂಡರಿಗೆ ಹಲವು ಸಲಹೆಸೂಚನೆಗಳನ್ನು ನೀಡಲಿದ್ದಾರೆ.

# ಮಾತುಕತೆ:
ಲೋಕಸಭೆ ಚುನಾವಣೆ ಪೂರ್ವ ಹೊಂದಾಣಿಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರೊಂದಿಗೆ ನಿನ್ನೆ ಗೌಡರು ಸಭೆ ನಡೆಸಿದ್ದರೂ ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಉಭಯ ಪಕ್ಷಗಳ ನಡುವೆ ಲೋಕಸಭೆ ಸೀಟು ಹಂಚಿಕೆ ಕುರಿತಂತೆ ಮಾತುಕತೆ ಮುಂದುವರೆದಿದೆ. ಈ ವಿಚಾರವೂ ಕೂಡ ಇಂದಿನ ಸಭೆಯಲ್ಲಿ ಚರ್ಚೆಗೆ ಬರಲಿದೆ.

ಸಭೆಗೂ ಮುನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಈಗಾಗಲೇ ಲೋಕಸಭಾ ಚುನಾವಣಾ ಸಿದ್ಧತೆ, ಕಾಂಗ್ರೆಸ್‍ನೊಂದಿಗೆ ಮೈತ್ರಿ, ಪ್ರಚಲಿತ ರಾಜಕೀಯ ವಿದ್ಯಮಾನಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಇಂದು ಸಂಜೆ ನಡೆಯುವ ಲೋಕಸಭಾ ಕ್ಷೇತ್ರಗಳ ಪೂರ್ವ ಸಿದ್ಧತಾ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

Facebook Comments

Sri Raghav

Admin