ಏರ್ ಶೋದಲ್ಲಿ ಧೃವ ಮತ್ತು ರುದ್ರ ಹೆಲಿಕಾಪ್ಟರ್ ಗಳಿಂದ ‘ಸರ್ಜಿಕಲ್ ಸ್ಟ್ರೈಕ್’

ಈ ಸುದ್ದಿಯನ್ನು ಶೇರ್ ಮಾಡಿ

– ರಮೇಶ್‍ಪಾಳ್ಯ
ಬೆಂಗಳೂರು, ಫೆ.22- ಸೂರ್ಯಕಿರಣ ಲಘು ವಿಮಾನಗಳು ತಾಲೀಮು ವೇಳೆ ಅಪಘಾತಕ್ಕೀಡಾಗಿ ಎಚ್‍ಎಎಲ್ ನಿರ್ಮಿತ ವಿಮಾನಗಳ ಕಾರ್ಯವೈಖರಿ ಬಗ್ಗೆ ಮೂಡಿದ್ದ ಅನುಮಾನಗಳಿಗೆ ಧೃವ ಮತ್ತು ರುದ್ರ ಹೆಲಿಕಾಪ್ಟರ್‍ಗಳು ಸರ್ಜಿಕಲ್ ಸ್ಟ್ರೈಕ್ ಮಾದರಿ ಪ್ರದರ್ಶನ ಮೂಲಕ ತೆರೆ ಎಳೆದವು.

ಏರ್‍ಶೋನಲ್ಲಿ ರುದ್ರ ಮತ್ತು ಧೃವ ಹೆಲಿಕಾಪ್ಟರ್‍ಗಳು ನಡೆಸಿದ ಸರ್ಜಿಕಲ್ ಸ್ಟ್ರೈಕ್ ಪ್ರದರ್ಶನ ಶತ್ರು ರಾಷ್ಟ್ರಕ್ಕೆ ನುಗ್ಗಿ ನಿಜವಾಗಿ ಸರ್ಜಿಕಲ್ ಸ್ಟ್ರೈಕ್ ಮಾಡಿದಂತೆ ಮೈನವಿರೇಳಿಸಿತು.

ಲೆಫ್ಟಿನೆಂಟ್ ಕರ್ನಲ್ ವಿಕಾಸ್‍ಸಿಂಗ್ ನೇತೃತ್ವದ ಎಚ್‍ಎಎಲ್ ನಿರ್ಮಿತ ರುದ್ರ ಮತ್ತು ಧೃವ ಹೆಲಿಕಾಪ್ಟರ್‍ಗಳು ಬಾನಂಗಳದಲ್ಲೇ ನಿಂತು ಹಗ್ಗವನ್ನು ಕೆಳಗೆ ಬಿಟ್ಟು ಈ ಮೂಲಕ ಸೈನಿಕರು ಸರಸರನೆ ಇಳಿದುಬರುವುದು, ಒಂದು ಕೈಯಲ್ಲಿ ಹಗ್ಗ ಹಿಡಿದು, ಮತ್ತೊಂದು ಕೈಯನ್ನು ಇನ್ನೊಬ್ಬ ಯೋಧನೊಂದಿಗೆ ಜೋಡಿಸಿ ಬಂದೂಕು ಹಾರಿಸುವುದು, ನಾಲ್ಕು ದಿಕ್ಕಿನಲ್ಲಿ ಜೀಪ್‍ಗಳನ್ನು ಹಗ್ಗದಿಂದ ಕಟ್ಟಿ ನಿಗದಿತ ಸ್ಥಳದಲ್ಲಿ ಇಳಿಸುವ ದೃಶ್ಯಗಳು ವಾಯುನೆಲೆಯ ಅಧಿಕಾರಿಗಳು, ಸೈನಿಕರ ಸಾಮಥ್ರ್ಯಕ್ಕೆ ಕೈಗನ್ನಡಿಯಂತಿತ್ತು.

ಪ್ರದರ್ಶನಕ್ಕೂ ಮುನ್ನ ಪ್ಯಾರಾರೆಜಿಮೆಂಟ್‍ನ ಯೋಧರು 8000 ಅಡಿ ಮೇಲಿನಿಂದ ಬಣ್ಣಬಣ್ಣದ ಪ್ಯಾರಾಚೂಟ್ ಮೂಲಕ ಭೂಮಿಗಿಳಿಯುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸಿತು. ಝಾಜ್ ಅಪ್ಕಿನ್‍ಸನ್ ನೇತೃತ್ವದ ಯಾಕ್ ವಿಮಾನಗಳು ಬಾನಂಗಳದಲ್ಲಿ ಹೃದಯ ಮಾದರಿ ಚಿತ್ತಾರ ಬಿಡಿಸುವ ಮೂಲಕ ಎಲ್ಲರನ್ನು ಪುಳಕಿತಗೊಳಿಸಿದವು.

ಎರಡು ಯಾಕ್ ವಿಮಾನಗಳು ಇನ್ನೇನು ಪರಸ್ಪರ ಡಿಕ್ಕಿಯಾದವೇನೋ ಎಂದು ಪ್ರೇಕ್ಷಕರು ಹೃದಯ ಬಿಗಿ ಹಿಡಿದು ನೋಡುತ್ತಿರುವಾಗಲೇ ಕ್ಷಣ ಮಾತ್ರದಲ್ಲಿ ಬೇರೆ ಬೇರೆಯಾಗಿ ಸುಂಯ್ ಎಂದು ಮೇಲೇರುವ ದೃಶ್ಯ ಎಲ್ಲರ ಎದೆ ಝಲ್ಲೆನಿಸಿತ್ತು.

ಯಾಕ್ ವಿಮಾನವೊಂದು ನೇರ ಬಾನಂಗಳಕ್ಕೆ ಚಿಮ್ಮಿ ತಕ್ಷಣ ಗಿರಗಿರನೆ ಸುತ್ತುತ್ತಾ ಕ್ಷಣದಲ್ಲಿ ಅಲರ್ಟ್ ಆಗಿ ಸುಯ್ಯನೆ ಹಾರಾಡುತ್ತಾ ಬೆರಗು ಮೂಡಿಸಿತು. ಲೆಫ್ಟಿನೆಂಟ್ ಕರ್ನಲ್ ಮಿಶ್ರಾ ನೇತೃತ್ವದ ತಂಡ ಸುಖೋಯ್ ಯುದ್ಧ ವಿಮಾನಗಳ ಹಾರಾಟ ಎಲ್ಲರ ಗಮನ ಸೆಳೆಯಿತು. ಪ್ರೋಟೋ, ತೇಜಸ್, ಧನುಷ್, ನೇತ್ರ, ಡಕೋಟಾ, ಸಾರಸ್ ಎಫ್-16, ಸಾರಂಗ್ ರಫೇಲ್ ವಿಮಾನಗಳ ಹಾರಾಟ ಏರ್‍ಶೋನ 3ನೇ ದಿನದ ಹೈಲೈಟ್.

# ಭಾರೀ ಜನಸಂದಣಿ:
ಸೂರ್ಯ ಕಿರಣ ವಿಮಾನ ಪತನದಿಂದಾಗಿ ಏರ್‍ಶೋನ ಮೊದಲೆರಡು ದಿನ ಜನಸಂದಣಿ ಅಷ್ಟಾಗಿರಲಿಲ್ಲ. ಆದರೆ ದೇಶ-ವಿದೇಶಗಳ ಯುದ್ಧ ವಿಮಾನಗಳು ಬಾನಿನಲ್ಲಿ ಚೆಲುವಿನ ಚಿತ್ತಾರ ಬಿಡಿಸುತ್ತಿದ್ದುದು ದೂರದಿಂದಲೇ ಕಂಡು ಮನಸೋತ ಸಾರ್ವಜನಿಕರು ಮೂರನೇ ದಿನ ಸಾಗರೋಪಾದಿಯಲ್ಲಿ ಹರಿದುಬಂದರು. ನಾಳೆ ಶನಿವಾರ ಮತ್ತು ಭಾನುವಾರ ರಜೆ ಇರುವುದರಿಂದ ಇವೆರಡು ದಿನಗಳಲ್ಲಿ ಲಕ್ಷಾಂತರ ಜನ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ.

# ಟ್ರಾಫಿಕ್‍ಜಾಮ್:
ಬೆಳಗ್ಗೆ 7 ರಿಂದಲೇ ಹೆಬ್ಬಾಳ ಫ್ಲೈಓವರ್ ಮೇಲೆ ಕಿಲೋಮೀಟರ್‍ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದಲ್ಲದೆ, ನಾಲ್ಕು ದಿಕ್ಕಿನಿಂದ ಲಕ್ಷಾಂತರ ಜನ ಏರ್‍ಶೋಗೆ ಆಗಮಿಸುತ್ತಿರುವುದರಿಂದ ವಿಮಾನ ನಿಲ್ದಾಣದ ರಸ್ತೆಯೇ ಕಾಣದೆ ಬರೀ ವಾಹನಗಳೇ ಕಂಡುಬಂದವು. ಅಂತೂ ಟ್ರಾಫಿಕ್ ಜಾಮ್ ಆಗಲಿ, ಏನೇ ಆಗಲಿ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಜನಸಾಗರ ಹರಿದುಬರುತ್ತಲೇ ಇತ್ತು.

Facebook Comments

Sri Raghav

Admin