ಬಂಧನದ ಭೀತಿಯಿಂದ ಪಾರಾದ ರಾಜ್ಯದ ಇಬ್ಬರು ಪ್ರಭಾವಿ ಮುಖಂಡರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.22-ರಾಜ್ಯದ ಇಬ್ಬರು ಪ್ರಭಾವಿ ಮುಖಂಡರು ಇಂದು ಬಂಧನದ ಭೀತಿಯಿಂದ ಪಾರಾಗಿದ್ದಾರೆ. ಆಪರೇಷನ್ ಕಮಲ ಆಡಿಯೋ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ತಡೆಯಾಜ್ಞೆ ದೊರೆತರೆ, ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ಒಂದು ವೇಳೆ ನ್ಯಾಯಾಲಯ ತಡೆಯಾಜ್ಞೆ ನೀಡದಿದ್ದರೆ ಈ ಇಬ್ಬರು ನಾಯಕರು ಬಂಧನದ ಭೀತಿಗೆ ಒಳಗಾಗಬೇಕಾಗಿತ್ತು. ಆಪರೇಷನ್ ಕಮಲದ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿ.ಎಸ್.ಯಡಿಯೂರಪ್ಪ , ದೇವದುರ್ಗದಲ್ಲಿ ಶಾಸಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಅವರ ಜೊತೆ ನಡೆಸಿದ ಆಡಿಯೋ ಪ್ರಕರಣದ ಎಫ್‍ಐಆರ್‍ಗೆ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ.

ಈ ಪ್ರಕರಣದಲ್ಲಿ ಯಡಿಯೂರಪ್ಪ ಮೊದಲ ಆರೋಪಿಯಾಗಿದ್ದರೆ, ಶಾಸಕರಾದ ಶಿವನಗೌಡ ನಾಯಕ್(ದೇವದುರ್ಗ), ಪ್ರೀತಂ ಗೌಡ(ಹಾಸನ) ಮತ್ತು ಪತ್ರಕರ್ತ ಮರಮಕಲ್ ಇತರೆ ಆರೋಪಿಗಳಾಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಗೌಡ ರಾಯಚೂರಿನಲ್ಲಿ ಯಡಿಯೂರಪ್ಪ ಹಾಗೂ ಇತರರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಿದರು. ದೂರು ದಾಖಲಾಗುತ್ತಿದ್ದಂತೆ ರಾಯಚೂರು ಪೊಲೀಸರು ಆರೋಪಿಗಳ ವಿರುದ್ದ ಎಫ್‍ಐಆರ್ ದಾಖಲಿಸಿದ್ದರು.

ಯಾವಾಗ ಪೊಲೀಸರು ತಮ್ಮ ವಿರುದ್ದ ಎಫ್‍ಐಆರ್ ದಾಖಲಿಸಿದರೋ ಹೆಚ್ಚಿನ ವಿಚಾರಣೆಗಾಗಿ ಬಂಧಿಸಬಹುದೆಂಬ ಭೀತಿಯಿಂದಾಗಿ ಬಿಎಸ್‍ವೈ ಪರ ವಕೀಲರು ಕಲಬುರಗಿ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿ ಎಫ್‍ಐಆರ್ ರದ್ದುಪಡಿಸಬೇಕೆಂದು ಮನವಿ ಮಾಡಿದ್ದರು.

ಯಡಿಯೂರಪ್ಪ ಪರ ಖ್ಯಾತ ನ್ಯಾಯವಾದಿ ಸಿ.ವಿ.ನಾಗೇಶ್ ವಾದ ಮಂಡಿಸಿ ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿರುವುದರಿಂದ ಆರೋಪಿಗಳ ವಿರುದ್ದ ದಾಖಲಾಗಿರುವ ಎಫ್‍ಐಆರ್‍ನ್ನು ರದ್ದುಪಡಿಸಬೇಕು.

ಕಕ್ಷಿದಾರರು ಎಲ್ಲಿಯೂ ಲಂಚ ನೀಡುವುದಾಗಿ ಹೇಳಿಲ್ಲ. ಚುನಾವಣೆಗೆ ಖರ್ಚುವೆಚ್ಚ ನೀಡುವುದಾಗಿ ಹೇಳಿದ್ದಾರೆ ಹೊರತು ಭ್ರಷ್ಟಾಚಾರಕ್ಕೆ ಎಲ್ಲಿಯೂ ನೇರವಾಗಿ ಉತ್ತೇಜನ ನೀಡಿಲ್ಲ. ಈ ಪ್ರಕರಣವೇ ರಾಜಕೀಯ ದುರದ್ದೇಶದಿಂದ ಕೂಡಿರುವುದರಿಂದ ಎಫ್‍ಐಆರ್ ರದ್ದುಪಡಿಸಬೇಕೆಂದು ನ್ಯಾಯಮೂರ್ತಿ ಪ್ರಹ್ಲಾದ್ ಗೋವಿಂದರಾವ್ ಮಾಲಿಪಾಟೀಲ್ ಅವರಿದ್ದ ಪೀಠಕ್ಕೆ ನಾಗೇಶ್ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರೇನಹಳ್ಳಿ ಅವರು ಶಿವನಗೌಡ ನಾಯಕ್, ಪ್ರೀತಂಗೌಡ ಹಾಗೂ ಮರಮಕಲ್ ಪರ ವಾದ ಮಂಡಿಸಿದ್ದರು. ಸರ್ಕಾರದ ಪರ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕ ಸಂಜಯ್ ಚೌಟ ವಾದ ಮಂಡಿಸಿ ಯಾವುದೇ ಕಾರಣಕ್ಕೂ ಪ್ರಕರಣದ ಆರೋಪಿಗಳ ಎಫ್‍ಐಆರ್ ರದ್ದುಪಡಿಸಬಾರದು.

ಇದೊಂದು ಗಂಭೀರವಾದ ಪ್ರಕರಣವಾಗಿರುವುದರಿಂದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದರು. ಅಂತಿಮವಾಗಿ ಎರಡು ಕಡೆ ವಾದ-ವಿವಾದ ಆಲಿಸಿದ್ದ ನ್ಯಾಯಪೀಠ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು.

ಡಿಕೆಶಿಗೆ ರಿಲೀಫ್:
ಡಿ.ಕೆ.ಶಿವಕುಮಾರ್, ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಸಮನ್ಸ್ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮಾ.7ಕ್ಕೆ ಮುಂದೂಡಲಾಗಿದೆ. ಫೆ.2ರಂದು ವಿಚಾರಣೆಗೆ ಹಾಜರಾಗುವಂತೆ ಜ.17ರಂದು ಇಡಿ ಸಮನ್ಸ್ ನೀಡಿತ್ತು.

ಆದರೆ, ಬಜೆಟ್ ಅಧಿವೇಶನ ಇದ್ದ ಕಾರಣ ಡಿಕೆಶಿ ಅವರು ಕಾಲಾವಕಾಶ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಫೆ.22ರಂದು ವಿಚಾರಣೆಗೆ ಹಾಜರಾಗಿ ಎಂದು ಸೂಚಿಸಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ಖುದ್ದು ಸಚಿವ ಡಿ.ಕೆ. ಶಿವಕುಮಾರ್ ಬರಬೇಕು ಎಂದು ಸಮನ್ಸ್‍ನಲ್ಲಿ ಉಲ್ಲೇಖಿಸಲಾಗಿತ್ತು.

ಅವರ ವಿರುದ್ಧ 276 ಸಿ, 277 ಐಟಿ ಆ್ಯಕ್ಟ್, 120ಬಿ ಐಪಿಸಿ ಅಡಿ ಐಟಿ ಕೇಸ್ ದಾಖಲಿಸಿದೆ. ಸಮನ್ಸ್ ರದ್ದು ಕೋರಿ ಡಿ.ಕೆ. ಶಿವಕುಮಾರ್ ಜೊತೆಗೆ ಅವರ ನಾಲ್ವರು ಆಪ್ತರು ಅರ್ಜಿ ಸಲ್ಲಿಕೆ ಮಾಡಿದ್ದರು.

Facebook Comments

Sri Raghav

Admin