ಮಾರ್ಚ್ ಮೊದಲ ವಾರದಲ್ಲಿ ರಾಹುಲ್‍ ರಾಜ್ಯ ಪ್ರವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.22- ಲೋಕಸಭೆ ಚುನಾವಣೆಗೆ ತಯಾರಿಯಾಗಿ ಜಿಲ್ಲಾ ಸಮಾವೇಶಗಳನ್ನು ಆರಂಭಿಸಿರುವ ಕಾಂಗ್ರೆಸ್ ಮಾರ್ಚ್ ಮೊದಲ ವಾರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಕರ್ನಾಟಕಕ್ಕೆ ಕರೆಸಲು ನಿರ್ಧರಿಸಿದೆ. ನಾಳೆಯಿಂದಲೇ ಜಿಲ್ಲಾ ಮಟ್ಟದ ಸಮಾವೇಶಗಳು ಆರಂಭಗೊಳ್ಳುತ್ತಿವೆ. ಮೊದಲ ಸಮಾವೇಶ ನಾಳೆ (ಫೆ.23)ರಾಯಚೂರಿನಲ್ಲಿ ನಡೆಯಲಿದ್ದು, ನಂತರ ವಿಜಯಪುರದಲ್ಲಿ ಫೆ.27ರಂದು, ಮಾ.6ರಂದು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನಡೆಯಲಿದೆ.

ಈ ನಡುವೆ ಮಾ.4ಕ್ಕೆ ರಾಹುಲ್‍ಗಾಂಧಿ ಅವರನ್ನು ಕರೆಸಲು ತಯಾರಿ ನಡೆದಿತ್ತು. ಆದರೆ, ಅಂದು ಶಿವರಾತ್ರಿ ಹಬ್ಬ ಇರುವುದರಿಂದ ಮಾರ್ಚ್ ಮೊದಲ ವಾರದಲ್ಲಿ ಸಮಾವೇಶ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ಹಾವೇರಿಯಲ್ಲಿ ಬೃಹತ್ ಬಹಿರಂಗ ಸಭೆ ನಡೆಸುವ ಮೂಲಕ ರಾಹುಲ್‍ಗಾಂಧಿ ಚುನಾವಣೆಯ ರಣಕಹಳೆಯನ್ನು ಊದಲಿದ್ದಾರೆ.

ಪ್ರತಿ ಹಂತದಲ್ಲೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವುದು ಮತ್ತು ಈ ಹಿಂದೆ ಯುಪಿಎ ಸರ್ಕಾರ ಹಾಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ನೀಡಿರುವ ಜನಪರ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡುವುದು ಜಿಲ್ಲಾ ಸಮಾವೇಶ ಮತ್ತು ಬಹಿರಂಗ ಸಭೆಗಳ ಉದ್ದೇಶವಾಗಿದೆ.

ಮಾರ್ಚ್ 15ರೊಳಗಾಗಿ ಲೋಕಸಭಾ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಸೂಚಿಸಿ ಜಿಲ್ಲಾ ಸಮಾವೇಶಗಳ ಆಯೋಜನೆಗೆ ಕ್ರಮ ಕೈಗೊಳ್ಳುವಂತೆ ವೇಣುಗೋಪಾಲ್ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ.

ಬಿಜೆಪಿಗೆ ಟಾಂಗ್ ನೀಡಲು ಕಾಂಗ್ರೆಸ್ ಶಕ್ತಿ ಮತ್ತು ಇಂದಿರಾ ಕಾರ್ಯಕ್ರಮಗಳ ಮೂಲಕ ಯುವ ಮತದಾರರನ್ನು ಆಕರ್ಷಿಸಲು ಯೋಜನೆ ರೂಪಿಸಿದೆ. ಬೇಸಿಗೆ ಬಿರುಬಿಸಿಲು ಶುರುವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ಕೂಡ ಹೆಚ್ಚಾಗುತ್ತಿದೆ.

Facebook Comments