ಪ್ರಧಾನಿ ಮೋದಿ ಗೆ ಸಿಯೋಲ್ ಶಾಂತಿ ಪುರಸ್ಕಾರ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

ಸಿಯೋಲ್, ಫೆ.22-ಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಪ್ರಗತಿಗಾಗಿ ನೀಡಿದ ಗಣನೀಯ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ನಲ್ಲಿ ಇಂದು ಪ್ರತಿಷ್ಠಿತ ಸಿಯೋಲ್ ಶಾಂತಿ ಪುರಸ್ಕಾರ-2018 ಪ್ರದಾನ ಮಾಡಿ ಗೌರವಿಸಲಾಯಿತು.

ಇಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಮೋದಿ ಅವರಿಗೆ ಸಿಯೋಲ್ ಪೀಸ್ ಪ್ರೈಜ್ ಪ್ರತಿಷ್ಠಾನದಿಂದ ಈ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಧಾನಿ ಅವರ ಜೀವನ ಮತ್ತು ಸಾಧನೆಗಳ ಕುರಿತ ಕಿರುಚಿತ್ರವೊಂದನ್ನು ಸಹ ಪ್ರದರ್ಶಿಸಲಾಯಿತು.

ನರೇಂದ್ರ ಮೋದಿ ಅವರು ಭಾರತೀಯ ಮತ್ತು ಜಾಗತಿಕ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಶ್ರೀಮಂತರು ಮತ್ತು ಬಡವರ ನಡುವಣ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯ ನಿವಾರಣೆಗಾಗಿ ಮೋದಿನೋಮಿಕ್ಸ್ ಮೂಲಕ ಶ್ರಮಿಸಿ ಅದರಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದು ಕಾರ್ಯಕ್ರಮ ಸಂಘಟಕರು ಗುಣಗಾನ ಮಾಡಿದರು.

ವಿಶ್ವದ ವಿವಿಧ ದೇಶಗಳೊಂದಿಗೆ ಪೂರಕ ನೀತಿಗಳ ಮೂಲಕ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗಾಗಿ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಪ್ರತಿಷ್ಠಾನ ಪ್ರಶಂಸಿಸಿದೆ. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೋದಿ, ಕಳೆದ ಐದು ವರ್ಷಗಳಿಂದ ಭಾರತೀಯರ ಆಶೋತ್ತರ ಮತ್ತು ಶ್ರಮದ ಫಲವಾಗಿ ಭಾರತ ಪ್ರಗತಿ ಪಥದತ್ತ ಸಾಗಿದೆ. ಈ ಪ್ರಶಸ್ತಿ ಅವರೆಲ್ಲರ ಶ್ರಮದ ಫಲ ಎಂದರು.

ಪ್ರಧಾನಿ ಮೋದಿ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ 14ನೇ ಅತಿಗಣ್ಯ ವ್ಯಕ್ತಿ. ಈ ಹಿಂದೆ ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಪಿ ಅನಾನ್, ಜರ್ಮನ್ ಚಾನ್ಸುಲರ್ ಏಂಜೆಲಾ ಮಾರ್ಕೆಲ್ ಮೊದಲಾದ ಖ್ಯಾತನಾಮರು ಈ ಪುರಸ್ಕಾರಕ್ಕೆ ಭಾಜನರಾಗಿದ್ದರು.

Facebook Comments