ಕಾಶ್ಮೀರಿಗಳಿಗೆ ರಕ್ಷಣೆ ನೀಡುವಂತೆ ರಾಜ್ಯಗಳಿಗೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.22-ಪುಲ್ವಾಮಾದಲ್ಲಿ ಉಗ್ರರ ದಾಳಿಗೆ 40ಕ್ಕೂ ಹೆಚ್ಚು ಯೋಧರು ಬಲಿಯಾದ ಘಟನೆ ನಂತರ ದೇಶದ ವಿವಿಧೆಡೆ ಕಾಶ್ಮೀರಿಗಳ ಮೇಲೆ ಹಲ್ಲೆ, ಪ್ರಾಣಬೆದರಿಕೆ ಹಾಗೂ ಸಾಮಾಜಿಕ ಬಹಿಷ್ಕಾರಗಳಂಥ ಪ್ರಕರಣಗಳು ಹೆಚ್ಚಾಗುತ್ತಿವೆ.

ಇವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್ ವಿದ್ಯಾರ್ಥಿಗಳೂ ಸೇರಿದಂತೆ ಕಾಶ್ಮೀರದ ಜನರಿಗೆ ರಕ್ಷಣೆ ನೀಡಲು ಹಾಗೂ ಇಂಥ ಕೃತ್ಯಗಳನ್ನು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು 11 ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪೀಠವು ಈ ಹಿಂದೆ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣಗಳೊಂದಿಗೆ ವ್ಯವಹರಿಸಲು ನೇಮಕಗೊಂಡಿದ್ದ ನೋಡಲ್ ಅಧಿಕಾರಿಗಳು(ಪೊಲೀಸ್ ಅಧಿಕಾರಿಗಳು) ಈಗ ಕಾಶ್ಮೀರಿಗಳ ವಿರುದ್ಧದ ಹಲ್ಲೆ ಪ್ರಕರಣಗಳನ್ನು ವ್ಯವಹರಿಸುವ ಹೊಣೆ ಹೊಂದಿರುತ್ತಾರೆ ಎಂದು ಸ್ಪಷ್ಟಪಡಿಸಿದೆ.

ಇಂಥ ಪ್ರಕರಣಗಳನ್ನು ನಿಭಾಯಿಸಲು ಹಾಗೂ ಇಂಥ ಕೃತ್ಯಕ್ಕೆ ಒಳಗಾದವರನ್ನು ಸಂಪರ್ಕಿಸಿ ಮಾಹಿತಿ ಪಡೆಯಲು ಅನುವಾಗುವಂತೆ ವ್ಯಾಪಕ ಪ್ರಚಾರ ನೀಡಲು ಕೇಂದ್ರದ ಗೃಹ ಸಚಿವಾಲಯಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಕಾಶ್ಮೀರಿಗಳು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಹಲ್ಲೆ, ಬೆದರಿಕೆ, ಸಾಮಾಜಿಕ ಬಹಿಷ್ಕಾರ ಇತ್ಯಾದಿಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಡಿಜಿಪಿಗಳು ಮತ್ತು ಪೊಲೀಸ್ ಆಯುಕ್ತರಿಗೆ ಪೀಠವು ನಿರ್ದೇಶನ ನೀಡಿದೆ.

Facebook Comments