ಬೆಂಗಳೂರಲ್ಲಿ ಕೆಎಂಸಿ ನಿಯಮಾವಳಿ ಗಾಳಿಗೆ ತೂರಿ ನಡೆಯುತ್ತಿದೆ ಫ್ಲೈ ಡೈನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಬ್ಯಾಟರಾಯನ ಪುರ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯು ತ್ತಿರುವ ಫ್ಲೈ ಡೈನಿಂಗ್ ರೆಸ್ಟೋರೆಂಟ್ ಕಾನೂನು ಬಾಹಿರ. ಕೆಎಂಸಿ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವ ಉದ್ಯಮ ವೊಂದರ ವ್ಯವಸ್ಥಿತ ವಂಚನೆ ಇದು. ರಾಜಧಾನಿ ಬೆಂಗಳೂರಿನ ಹೈ-ಫೈ ಮಂದಿಗೆ ಅಂಗೈಯಲ್ಲಿ ಆಕಾಶ ತೋರಿಸಿ ವಂಚಿಸುತ್ತಿರುವ ಈ ಸಂಸ್ಥೆ ಆಟಾಟೋಪಗಳನ್ನು ನೋಡಿಕೊಂಡು ಬಿಬಿಎಂಪಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

ನೆಲದಿಂದ 160 ಅಡಿ ಎತ್ತರಕ್ಕೆ ಕೊಂಡೊಯ್ದು, ಅಲ್ಲಿ ಕೆಲ ಘಂಟೆಗಳ ಕಾಲ ಮನರಂಜನೆ ನಡೆಸಿ ಸುಲಿಗೆ ಮಾಡುತ್ತಿರುವ ಈ ಫ್ಲೈ ಡೈನಿಂಗ್ ಉದ್ಯಮ ಅಕ್ರಮ. ಹೀಗೊಂದು ಟ್ರೇಡ್ ಆರಂಭಿಸಲಿಕ್ಕೆ ಸಾಧ್ಯವೂ ಇಲ್ಲ. ಕೆಎಂಸಿ ಕಾಯ್ದೆಯಲ್ಲಿ ನಿಯಮಗಳೂ ಇಲ್ಲ.

ಇದಕ್ಕಾಗಿ ಕೆಎಂಸಿ ಕಾಯ್ದೆಯಲ್ಲಿ ಹೊಸ ನಿಯಮ ರೂಪಿಸಬೇಕು. ಆದರೆ ಅದ್ಯಾವುದನ್ನೂ ಮಾಡದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ಫ್ಲೈ ಡೈನಿಂಗ್ ಹೈ-ಫೈ ಮಂದಿಯನ್ನು ಅಚ್ಚುಕಟ್ಟಾಗಿ ಸುಲಿಗೆ ಮಾಡುತ್ತಿದೆ.

ದೇಶದಲ್ಲೇ ಮೊದಲ ಆಕಾಶದ ರೆಸ್ಟೋರೆಂಟ್ ಎಂಬ ಖ್ಯಾತಿ ಇದಕ್ಕಿದೆ. ದುಬೈ ಮೂಲದ ಸಂಸ್ಥೆ ಇದಾಗಿದ್ದು, ಕ್ರೇನ್‍ನಲ್ಲಿ ಗ್ರಾಹಕರನ್ನು ಕೊಂಡೊ ಯ್ದು ಊಟ ಮಾಡಿಸಿ ಮನರಂಜನೆ ನೀಡಿ ಲಕ್ಷಗಟ್ಟಲೆ ಹಣ ಸುಲಿಗೆ ಮಾಡುತ್ತಿದೆ. ಮೇಲ್ನೋಟಕ್ಕೆ ಮನರಂಜನೆ ನೀಡುವ ಇದು ಅಪಾಯಕಾರಿ ಉದ್ಯಮವೂ ಕೂಡ.

ಇಂತಹದ್ದೊಂದು ಉದ್ಯಮವನ್ನು ಪ್ರಾರಂಭಿಸಲು ಸಾಕಷ್ಟು ಇಲಾಖೆಗಳ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಇದ್ಯಾವುದೂ ಇಲ್ಲದೆ ಈ ಉದ್ಯಮ ಪ್ರಾರಂಭವಾಗಿದೆ ಎಂದರೆ ಆಶ್ಚರ್ಯ.

ಅಗ್ನಿಶಾಮಕ, ಏರ್ ಸ್ಪೇಸ್ , ಏರ್ ಪೋರ್ಟ್  ಅಥಾರಿಟಿ, ವಾಯುಮಾಲಿನ್ಯ, ಜಲಮಂಡಳಿ ಯಿಂದಲೂ ನಿರಪೇಕ್ಷಣ ಪತ್ರ ಸಿಕ್ಕಿಲ್ಲ. ಇಷ್ಟೆಲ್ಲ ಇದ್ದರೂ ಪಾಲಿಕೆ ಅಧಿಕಾರಿಗಳು ಟ್ರೇಡ್ ಲೈಸೆನ್ಸ್ ನೀಡಿದ್ದಾರೆ. ಹಣದ ಆಸೆಗೆ ಬಿದ್ದು ಇಂತಹ ಅಕ್ರಮಕ್ಕೆ ಬಿಬಿಎಂಪಿ ಅನುಮತಿ ಕೊಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಲೈಫ್ ರಿಸ್ಕ್‍ನ ಈ ಉದ್ಯಮಕ್ಕೆ ಅಧಿಕಾರಿಗಳು ಪರ್ಮಿಷನ್ ನೀಡಿರುವುದು ಕುತೂಹಲ ಮೂಡಿಸಿದೆ. ಈ ಲೈಸೆನ್ಸ್ ಕೊಟ್ಟವರು ಸಾಕಷ್ಟು ಕಿಕ್‍ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಕ್ರಮ ನಡೆಯುತ್ತಿರುವುದು ಗೊತ್ತಿದ್ದರೂ ಸ್ಥಳೀಯ ಕಾರ್ಪೊರೇಟರ್ ಗಳು  ಕಣ್ಮುಚ್ಚಿ ಕುಳಿತಿರುವುದು ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.  ಈ ಉದ್ಯಮ ಮುಚ್ಚುವಂತೆ ನೀಡಿದ ನೋಟೀಸ್‍ಗೂ ಮಾಲೀಕ ಕೇರ್ ಮಾಡಿಲ್ಲ. ರಾಜಾರೋಷವಾಗಿ ಉದ್ಯಮ ನಡೆಯುತ್ತಿದೆ. ಕ್ಷಣ ಕ್ಷಣಕ್ಕೂ ಆನ್‍ಲೈನ್‍ನಲ್ಲಿ ಗ್ರಾಹಕರು

ಬುಕ್ ಮಾಡುತ್ತಿದ್ದಾರೆ. ಏನಿದರ ಮರ್ಮ? ಜೀವದ ಜೊತೆ ಚೆಲ್ಲಾಟವಾಡುವ ಈ ಫ್ಲೈ ಡೈನಿಂಗ್ ನಮಗೆ ಬೇಕಾ ಎಂದು ಸ್ಥಳೀಯ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Facebook Comments