ಬೆಂಗಳೂರಲ್ಲಿ ಒಡಿಶಾ ಮೂಲದ ಮೂವರ ಸೆರೆ, 2 ಕೆ.ಜಿ ಗಾಂಜಾ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ. 23- ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಹೊರರಾಜ್ಯದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಎರಡು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಒಡಿಶಾದ ಪುಣ್ಯ ಖುರಾನ್(19), ದೇಬಶಿಷ್ ಪಟ್ನಾಯಕ್ (24), ಸುಬಾಂಕಿತ್ ಮಹಾಪಾತ್ರ(20) ಬಂಧಿತ ಆರೋಪಿಗಳು.

ಜೀವನ್ ಭೀಮಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಎಚ್‍ಎಎಲ್ 2ನೇ ಹಂತ ,17ನೇ ಮೇನ್, 100 ಅಡಿ ರಸ್ತೆ, ಕೆಇಬಿ ಟ್ರಾನ್ಸಫಾರ್ಮರ್ ಹತ್ತಿರ ಒರಿಸ್ಸಾ ಮೂಲದ ಈ ಮೂರು ಜನ ಆರೋಪಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ 1.50ಲಕ್ಷ ಮೌಲ್ಯದ ಎರಡು ಕೆಜಿ ಗಾಂಜಾ, ಮೂರು ಮೊಬೈಲ್ ಹಾಗೂ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಅಪರಾಧದ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಉಪಪೊಲೀಸ್ ಆಯುಕ್ತ ಗಿರೀಶ್.ಎಸ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತ ಬಿ.ಆರ್.ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.

Facebook Comments