‘ಆಪರೇಷನ್ ಆಲ್‍ಔಟ್’ಗಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಸೇನೆ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಶ್ರೀನಗರ, ಫೆ.23- ಪುಲ್ವಾಮಾ ದಾಳಿ ನಂತರ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಭಾರತೀಯ ಸೇನಾಪಡೆ ಆಪರೇಷನ್ ಆಲ್‍ಔಟ್ ಭಾಗವಾಗಿ ಕಣಿವೆ ರಾಜ್ಯಕ್ಕೆ ಹೆಚ್ಚುವರಿ ಯೋಧರನ್ನು ರವಾನಿಸಿದೆ.ಇಂದು ಬೆಳಗ್ಗೆ ನೂರಕ್ಕೂ ಹೆಚ್ಚು ಕಮ್ಯಾಂಡೋಗಳು ವಿಶೇಷ ವಿಮಾನದಲ್ಲಿ ಕಾಶ್ಮೀರಕ್ಕೆ ತೆರಳಿದ್ದಾರೆ.

ಪುಲ್ವಾಮಾ ದಾಳಿ ನಂತರ ಕಾಶ್ಮೀರ ಕಣಿವೆಯಲ್ಲಿ ಮತ್ತಷ್ಟು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಜೈಷ್-ಎ-ಮೊಹಮ್ಮದ್ ಉಗ್ರರು ಸಜ್ಜಾಗಿದ್ದಾರೆಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಆಪರೇಷನ್ ಆಲ್‍ಔಟ್ ಕಾರ್ಯಾಚರಣೆ ಮತ್ತಷ್ಟು ಬಿರುಸಾಗಿದೆ.

ಇದೇ ಉದ್ದೇಶಕ್ಕಾಗಿ ನೂರು ವಿಶೇಷ ಯೋಧರನ್ನು ಇಂದು ಬೆಳಗ್ಗೆ ರಾಜಧಾನಿ ದೆಹಲಿಯಿಂದ ಕಾಶ್ಮೀರಕ್ಕೆ ಏರ್‍ಲಿಫ್ಟ್ ಮಾಡಲಾಯಿತು. ಈಗಾಗಲೇ ಕಣಿವೆ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಪಡೆಗಳೊಂದಿಗೆ ಈ ನೂರು ಕಮ್ಯಾಂಡೋಗಳು ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ನೆರವಾಗಲಿದ್ದಾರೆ.ಪುಲ್ವಾಮಾ ದಾಳಿ ನಂತರ ಕಾಶ್ಮೀರ ಕಣಿವೆಯ ವಿವಿಧೆಡೆ ಸೇನಾಪಡೆಗಳು ಎನ್‍ಕೌಂಟರ್ ಮೂಲಕ ಕೆಲ ಜೈಷ್ ಉಗ್ರರನ್ನು ಈಗಾಗಲೇ ಹೊಡೆದುರುಳಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈಗ ಹೆಚ್ಚುವರಿ ಸೇನಾಪಡೆ ಕಾಶ್ಮೀರ ಕಣಿವೆಗೆ ರವಾನೆಯಾಗಿರುವುದರಿಂದ ಭಯೋತ್ಪಾದಕರು ಮತ್ತು ಇತರ ಉಗ್ರಗಾಮಿ ಸಂಘಟನೆಗಳಲ್ಲಿ ನಡುಕ ಶುರುವಾಗಿದ್ದು, ಉಗ್ರರ ಬೇಟೆ ಕಾರ್ಯಾಚರಣೆ ಮುಂದುವರಿಯಲಿದೆ.

Facebook Comments