ಕಬ್ಬು ಕಟಾವು ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಚಿರತೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಕೆಆರ್ ಪೇಟೆ, ಫೆ.23- ಕಬ್ಬು ಕಟಾವು ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಚಿಕ್ಕೋಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಡುವಿನಕೋಡಿಯ ಸುರೇಶ್ ಮತ್ತು ದಿನೇಶ್ ಗಾಯಗೊಂಡ ಕಾರ್ಮಿಕರಾಗಿದ್ದಾರೆ.ಸುರೇಶ್ ಮತ್ತು ದಿನೇಶ್ ಸೇರಿದಂತೆ 10 ಮಂದಿ ಕಾರ್ಮಿಕರ ಗುಂಪು ಚಿಕ್ಕೋಸಹಳ್ಳಿ ರಾಮೇಗೌಡರ ಕಬ್ಬಿನ ಬೆಳೆ ಕಟಾವು ಮಾಡುತ್ತಿತ್ತು.

ಈ ವೇಳೆ ಕಬ್ಬಿನ ಗದ್ದೆಯೊಳಗೆ ಅಡಗಿ ಕುಳಿತಿದ್ದ ಚಿರತೆಯು ಏಕಾಏಕಿ ಸುರೇಶ್ ಅವರ ಮೇಲೆ ದಾಳಿ ನಡೆಸಿ ತಲೆಯ ಭಾಗ ಮತ್ತು ಬೆನ್ನಿನ ಭಾಗವನ್ನು ಕಚ್ಚಿ ಗಾಯಗೊಳಿಸಿತು. ಈ ವೇಳೆ ಸುರೇಶ್ ಅವರ ಸಹಾಯಕ್ಕೆ ಹೋದ ದಿನೇಶ್ ಅವರಿಗೂ ಕಚ್ಚಿ ಗಾಯಗೊಳಿಸಿ ಚಿರತೆಯು ಪರಾರಿಯಾಯಿತು.

ಕೂಡಲೇ ಗಾಯಾಳುಗಳನ್ನು ಜಮೀನಿನ ಮಾಲೀಕರಾದ ರಾಮೇಗೌಡ ಮತ್ತು ವಿ.ಎನ್.ಮಹದೇವೇಗೌಡ ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ದಾಖಲಿಸಿದರು. ಗಂಭೀರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆಯ ವಿಷಯ ತಿಳಿದ ಕೂಡಲೇ ಆಸ್ಪತ್ರೆಗ ದೌಡಾಯಿಸಿದ ತಾಲೂಕು ಅರಣ್ಯ ಸಂರಕ್ಷಣಾಧಿಕಾರಿ ಮಧುಸೂಧನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಘವೇಂದ್ರ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಅಲ್ಲದೆ, ಚಿರತೆ ದಾಳಿಯಿಂದ ಗಾಯಗೊಂಡಿರುವ ಕಾರ್ಮಿಕರ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಅರಣ್ಯ ಇಲಾಖೆಯೇ ಭರಿಸಲಿದೆ ಎಂದರು.

Facebook Comments