ಯಲಹಂಕ ವಾಯುನೆಲೆಯಲ್ಲಿ ಬೆಂಕಿ, 300ಕ್ಕೂ ಹೆಚ್ಚು ಕಾರುಗಳು ಭಸ್ಮ, ಏರ್ ಷೋ ಸ್ಥಗಿತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿ 300ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ದಟ್ಟ ಹೊಗೆ ಆವರಿಸಿ ಏರ್‍ಶೋ ಸ್ಥಗಿತಗೊಳಿಸಲಾಗಿದೆ.

ಈ ಘಟನೆಯಿಂದ ಜನತೆ ಬೆಚ್ಚಿಬಿದ್ದಿದ್ದಾರೆ. ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರು ಬೆಂಕಿ, ದಟ್ಟ ಹೊಗೆ ಕಂಡು ಆತಂಕಕ್ಕೊಳಗಾಗಿದ್ದಾರೆ.

ವೈಮಾನಿಕ ಪ್ರದರ್ಶನ ಉದ್ಘಾಟನೆಗೂ ಮುನ್ನಾ ದಿನ ತಾಲೀಮು ನಡೆಸುವ ವೇಳೆ ಸೂರ್ಯ ಕಿರಣ ಎಂಬ ಎರಡು ವಿಮಾನಗಳು ಹಾರಾಡುತ್ತಿದ್ದಾಗಲೇ ಪರಸ್ಪರ ಡಿಕ್ಕಿಯಾದ ಘಟನೆಯಲ್ಲಿ ಓರ್ವ ಪೈಲೆಟ್ ಸಾವನ್ನಪ್ಪಿದ ದುರ್ಘಟನೆ ಮಾಸುವ ಮುನ್ನವೇ ಇಂದು ಭಾರೀ ಅಗ್ನಿ ಅವಘಡ ಸಂಭವಿಸಿ ಸುಮಾರು 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ.

ವಾಯುನೆಲೆಯಲ್ಲಿ ಏರ್‍ಶೋ ನಡೆಯುತ್ತಿರುವ ರಸ್ತೆಯ ಗೇಟ್ ನಂ.5ರ ಬಳಿ ಕಾಣಿಸಿಕೊಂಡ ಬೆಂಕಿ ರೌದ್ರಾವತಾರ ತಾಳಿ ಕಾರುಗಳು ಧಗಧಗನೆ ಹೊತ್ತಿ ಉರಿದಿವೆ.
ಸ್ಥಳಕ್ಕೆ 20ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಯ ಈ ಅವಘಡದಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ವೈಮಾನಿಕ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ವೈಮಾನಿಕ ಪ್ರದರ್ಶನವನ್ನು ಮುಂದುವರಿಸಬೇಕೆ, ಬೇಡವೆ ಎಂಬ ಬಗ್ಗೆ ವಾಯುಪಡೆ ಅಧಿಕಾರಿಗಳು ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ಯಾವುದೇ ಪ್ರಾಣಾಪಾಯವಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಈಗಾಗಲೇ ಮೊದಲ ಹಂತದ ವೈಮಾನಿಕ ಪ್ರದರ್ಶನ ಮುಕ್ತಾಯಗೊಂಡಿದ್ದು, ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಜನ ಇಂದು ವೀಕ್ಷಣೆಗೆ ತೆರಳಿದ್ದರು.

ಏರ್ಪೋರ್ಟ್  ರಸ್ತೆಯ ಗೇಟ್ ನಂ.5ರ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು.ಭಾರೀ ಸಂಖ್ಯೆಯಲ್ಲಿ ವಾಹನಗಳು ನಿಂತಿದ್ದವು. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಎಂದು ಇನ್ನೂ ತಿಳಿದುಬಂದಿಲ್ಲ.

WhatsApp Image 2019-02-23 at 1.03.55 PM(1)WhatsApp Image 2019-02-23 at 1.03.55 PM

WhatsApp Image 2019-02-23 at 1.03.56 PM

Facebook Comments

Sri Raghav

Admin