ಮಂಡ್ಯದ ಜನರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ,ಫೆ.23- ಮಂಡ್ಯ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ, ಕಾವೇರಿ ಹೋರಾಟ ನಡೆಸಿದ ರೈತರ ಮೇಲೆ ಹಾಕಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಐದು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ಘೋಷಿಸಿದ ಬೆನ್ನಲ್ಲೇ ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯುವ ನಿರ್ಧಾರ ರೈತರ ಪಾಲಿಗೆ ಸಿಹಿ ಸುದ್ದಿಯಾಗಿದೆ.

ಮದ್ದೂರಿನ ಕೆಎಂ ದೊಡ್ಡಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾವೇರಿ ಹೋರಾಟದ ಸಮಯದಲ್ಲಿ ರೈತರ ಮೇಲೆ ದಾಖಲಾಗಿದ್ದ ಶೇ.95ರಷ್ಟು ಕೇಸುಗಳನ್ನು ಕೈಬಿಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ರೈತರ ಮೇಲೆ ಹೂಡಿರುವ ಕೇಸುಗಳ ಬಗ್ಗೆ ತಾಲೂಕುವಾರು ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೋರಾಟದ ಸಂದರ್ಭದಲ್ಲಿ ಸರ್ಕಾರದ ಆಸ್ತಿ-ಪಾಸ್ತಿ ನಷ್ಟ ಮಾಡಿರುವ ಕೇಸುಗಳು ವಾಪಸ್ ಪಡೆಯಲಿದ್ದೇವೆ.

ಆದರೆ ಖಾಸಗಿ ಆಸ್ತಿ ನಷ್ಟಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಕ್ಯಾಮೆರಾ, ಕಾರುಗಳ ಜಖಂ, ಅಂಗಡಿ, ಮುಗ್ಗಟ್ಟು ಮೇಲೆ ಕಲ್ಲು ತೂರಾಟ, ಪಾಂಡವಪುರ ಜಡ್ಜ್ ಮನೆ ಮೇಲೆ ದಾಳಿ ಸೇರಿದಂತೆ ಖಾಸಗಿಯಾಗಿ ನೀಡಿರುವ ಕೇಸುಗಳು ಕೋರ್ಟ್ ನಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಈಗಾಗಲೇ ಹೋರಾಟಗಾರರ ಪಟ್ಟಿ ಕಾರ್ಯ ಭರದಿಂದ ಸಾಗಿದ್ದು, ಇದೇ 27ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯಕ್ಕೆ ಆಗಮಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದು, ಅಂದೇ ಕಾವೇರಿ ಹೋರಾಟಗಾರರ ಮೇಲಿನ ಕೇಸ್ ವಾಪಸ್ ಪಡೆಯುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin