ಸ್ವಾತಂತ್ರ ಹೋರಾಟಗಾರ, ಹಿರಿಯ ಸಾಹಿತಿ, ನಾಡೋಜ ಕೊ.ಚನ್ನಬಸಪ್ಪ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಸ್ವಾತಂತ್ರ ಹೋರಾಟಗಾರ ಹಾಗೂ ಹಿರಿಯ ಸಾಹಿತಿ, ನಾಡೋಜ ಕೊ. ಚನ್ನಬಸಪ್ಪ (96) ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಅವರಿಗೆ 96 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡಗು ಸಮೀಪದ ಆಲೂರಿನಲ್ಲಿ ಜನಿಸಿದ ಚೆನ್ನಬಸಪ್ಪ ವಿದ್ಯಾರ್ಥಿಯಾಗಿದ್ದಾಗಲೇ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಸೆರೆವಾಸ ಅನುಭವಿಸಿದ್ದರು.

ಕರ್ನಾಟಕ ಏಕೀಕರಣದ ಹೋರಾಟದಲ್ಲೂ ತೊಡಗಿಸಿಕೊಂಡಿದ್ದರು. ನಿಷ್ಠುರವಾದಿಯಾಗಿದ್ದ ಅವರು ವೈಜ್ಞಾನಿಕ ಲೇಖಕರಾಗಿದ್ದರು. ವಿಜಯಪುರದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದರು. ನಾಡೋಜ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ಟಿಪ್ಪು ಜಯಂತಿ ಆಚರಣೆಯ ಸಮಯದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿ ಮಾಡಿದ್ದರು.  ಖಜಾನೆ, ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ರಕ್ತತರ್ಪಣ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯಕಥೆಗಳು, ಪ್ರಾಣಪಕ್ಷಿ, ಹೃದಯ ನೈವೇದ್ಯ ಮುಂತಾದ ಹಲವು ಕೃತಿಗಳನ್ನು ಅವರು ರಚಿಸಿದ್ದರು.

ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಕೂಡ ಪಡೆದರು. ಕತೆ, ಕವನ, ವಿಮರ್ಶೆ ಸೇರಿದಂತೆ ಕನ್ನಡದ ನಾನಾ ಸಾಹಿತ್ಯ ಪ್ರಕಾರಗಳಲ್ಲಿತಮ್ಮನ್ನು ತೊಡಗಿಸಿಕೊಂಡಿದ್ದ ಕೊಚೆ ಅವರು ಕುವೆಂಪು ಸಾಹಿತ್ಯದ ಆಳವಾದ ಅಧ್ಯಯನ ಮಾಡಿದ್ದವರು.

ಕೊ.ಚೆನ್ನಬಸಪ್ಪನವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಕೃಷ್ಣಭೈರೇಗೌಡ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಏಕೀಕರಣದ ಹೋರಾಟಗಾರ, ಕನ್ನಡ ಪ್ರಜ್ಞಾಯನ್ನು ಉಸಿರಾಗಿಸಿಕೊಂಡ ಹಿರಿಜೀವ, ಕುವೆಂಪು ಅವರ ಪರಮಾಪ್ತ ಶಿಷ್ಯ, ವೈಯಕ್ತಿಕವಾಗಿ ಸದಾ ನನಗೆ ಮಾರ್ಗದರ್ಶನ ನೀಡುತ್ತಿದ್ದ ಹಿತೈಷಿ ಕೋ.ಚೆನ್ನಬಸಪ್ಪನವರ ಅಗಲಿಕೆಯ ಸುದ್ದಿ ಆಘಾತವನ್ನುಂಟು ಮಾಡಿದೆ.

ಆ ಹಿರಿಯ ಚೇತನಕ್ಕೆ ಶ್ರದ್ಧಾಂಜಲಿ ಎಂದು ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ. ಕೊ.ಚನ್ನಬಸಪ್ಪನವರ ನಿಧನಕ್ಕೆ ಕರ್ನಾಟಕ ಸಾಹಿತ್ಯ ಕ್ಷೇತ್ರ ಮತ್ತು ಅವರ ಅಭಿಮಾನಿ ಬಳಗ ಸಂತಾಪ ವ್ಯಕ್ತಪಡಿಸಿದೆ.

Facebook Comments