ಯುವಕನ ಕೊಲೆ ಮಾಡಿ ಅಪಘಾತದಂತೆ ಬಿಂಬಿಸಿ ದುಷ್ಕರ್ಮಿಗಳು ಪರಾರಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಫೆ.23- ಯುವಕನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಅಪಘಾತವೆಂಬಂತೆ ಬಿಂಬಿಸಿ ಪರಾರಿಯಾಗಿರುವ ಘಟನೆ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯ ದತ್ತಗುಂಟೆ ಗ್ರಾಮದ ನಿವಾಸಿ ಲೋಕೇಶ್(35) ಕೊಲೆಯಾದ ದುರ್ದೈವಿ.

ಟಾಟಾ ಏಸ್ ವಾಹವನ್ನಿಟ್ಟುಕೊಂಡಿದ್ದ ಲೋಕೇಶ್ ಚಾಲಕ ವೃತ್ತಿ ಸಹ ಮಾಡುತ್ತಿದ್ದನು. ಶಿರಾ-ಹುಳಿಯೂರು ರಸ್ತೆ ಮೂಲಕ ಬೆಳಗಿನ ಜಾವ 3.30ರಲ್ಲಿ ಈತ ತೆರಳುತ್ತಿದ್ದಾಗ ದುಷ್ಕರ್ಮಿಗಳು ಈತನನ್ನು ರಾಮಾಪುರದ ಕಟ್ಟೆ ಬಳಿ ಅಡ್ಡಗಟ್ಟಿ ಕೆಳಗಿಳಿಸಿ ಕೊಲೆ ಮಾಡಿ ನಂತರ ಈತನ ವಾಹನವನ್ನು 10 ಅಡಿ ದೂರದ ಯಲಚೆಹಣ್ಣಿನ ಮರಕ್ಕೆ ಡಿಕ್ಕಿ ಹೊಡೆದಂತೆ ಬಿಂಬಿಸಿ ಶವವನ್ನು ಹಿಂದಿನಿಂದ ಚಕ್ರದ ಬಳಿ ಬಿಸಾಡಿ ಪರಾರಿಯಾಗಿದ್ದಾರೆ.

ಬೆಳಗ್ಗೆ 5.30ರ ಸಮಯದಲ್ಲಿ ಈ ಮಾರ್ಗದ ಮೂಲಕ ಬುಕ್ಕಾಪಟ್ಟಣಕ್ಕೆ ಹೋಗುತ್ತಿದ್ದ ಆನಂದ್ ಎಂಬಾತ ಟಾಟಾ ಏಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದಂತೆ ಇರುವುದನ್ನು ಗಮನಿಸಿ ಸಮೀಪದ ಹೋಗಿ ನೋಡಿದಾಗ ಲೋಕೇಶ್ ಶವ ಪತ್ತೆಯಾಗಿದೆ. ತಕ್ಷಣ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಸುದ್ದಿ ತಿಳಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ವೆಂಕಟೇಶ್ ಇನ್‍ಸ್ಪೆಕ್ಟರ್ ರಂಗಸ್ವಾಮಿ ಸ್ಥಳಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ. ಯಾರು, ಏತಕ್ಕಾಗಿ ಈತನನ್ನು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿಲ್ಲ.

ಹಣ, ಆಭರಣಗಳಿಗೆ ದರೋಡೆಕೋರರು ಕೊಲೆ ಮಾಡಿದ್ದಾರೆಯೇ, ಹಳೆ ದ್ವೇಷವೇ ಅಥವಾ ಬೇರೇನಾದರೂ ಕಾರಣ ಇರಬಹುದೇ ಎಂಬ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮೃತದೇಹವನ್ನು ಸಂಚಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಟಾಟಾ ಏಸ್ ವಾಹನದ ಮುಂಭಾಗದ ಗಾಜು ಸ್ವಲ್ಪ ಭಾಗ ಮಾತ್ರ ಜಖಂಗೊಂಡಿರುವುದು ಗಮನಿಸಿದರೆ ಯಾರೋ ಕೊಲೆ ಮಾಡಿ ಅಪಘಾತವೆಂಬಂತೆ ಬಿಂಬಿಸಿ ಪರಾರಿಯಾಗಿಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Facebook Comments