‘ಫೈರ್ ಶೋ’ನಲ್ಲಿ ಸುಟ್ಟ ಕಾರುಗಳ ಅಸ್ತಿಪಂಜರ ಕಂಡು ಮಾಲೀಕರ ಹೊಟ್ಟೆ ‘ಧಗ ಧಗ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಯಲಹಂಕ ವಾಯು ನೆಲೆಯ ವೈಮಾನಿಕ ಪ್ರದರ್ಶನದ ಕಾರ್ ಪಾರ್ಕಿಂಗ್ ಅಕ್ಷರಶಃ ಸ್ಮಶಾನದ ರೀತಿಯಾಗಿದೆ. 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. ಏರ್ ಶೋ ಪಾರ್ಕಿಂಗ್‍ನಲ್ಲಿ ಸುಟ್ಟ ಕಾರುಗಳ ಅವಶೇಷಗಳನ್ನು ನೋಡಿ ಮಾಲೀಕರು ಕಣ್ಣೀರಿಡುತ್ತಿದ್ದರು.

ಬೆಂಕಿಯ ಅವಘಡದಲ್ಲಿ ಸುಟ್ಟು ಕರಕಲಾದ ಕಾರುಗಳಲ್ಲಿ ತಾವು ಇಟ್ಟಿದ್ದ ವಸ್ತುಗಳನ್ನು ಪಡೆಯಲು ಕಾರು ಮಾಲೀಕರು ಹವಣಿಸುತ್ತಿದ್ದರು. ಸುಟ್ಟು ವಿರೂಪವಾದ ಕಾರುಗಳ ಮುಂದೆ ಗೋಳಿಡುತ್ತಾ ಕಾರಿನ ಒಳಗೆ ಇಟ್ಟಿದ್ದ ದಾಖಲೆಗಳು, ಮನೆಯ ಕೀಗಳು, ಮೊಬೈಲ್‍ಗಳು, ಸೂಟ್‍ಕೇಸ್ ಇನ್ನಿತರೆ ವಸ್ತುಗಳು ಏನಾದವೋ ಎಂದು ಪರದಾಡುತ್ತಿದ್ದವರ ಪರಿಸ್ಥಿತಿ ಮನ ಕಲಕುತ್ತಿತ್ತು.

ಏರ್ ಶೋ ನೋಡಲು 5 ಲಕ್ಷದಿಂದ ಹಿಡಿದು 5 ಕೋಟಿ ಬೆಲೆ ಬಾಳುವ ಕಾರಿನಲ್ಲಿ ಬಂದಿದ್ದ ಜನ ತಮ್ಮ ಕಾರುಗಳನ್ನು ಪಾರ್ಕ್ ಮಾಡಿ ಆರಾಮವಾಗಿ ಏರ್ ಶೋ ನೋಡುತ್ತಿದ್ದರು. ದಟ್ಟವಾದ ಹೊಗೆ ಕಂಡು ವಿಮಾನ ಅಪಘಾತವಾಗಿರಬಹುದು ಎಂದು ಶಂಕಿಸಿದರು.

ಆದರೆ ಕಾರ್ ಪಾರ್ಕಿಂಗ್‍ನಲ್ಲಿ ಬೆಂಕಿ ಬಿದ್ದಿದೆ ಎಂಬ ವಿಷಯ ತಿಳಿದು ಓಡೋಡಿ ಬಂದು ನೋಡಿದಾಗ ಕಾರುಗಳು ಧಗ ಧಗನೆ ಹೊತ್ತಿ ಉರಿಯುತ್ತಿದ್ದವು. ಅದನ್ನು ನೋಡಿ ಕಾರುಗಳ ಕೆಲವು ಮಾಲೀಕರು ಕಣ್ಣೀರು ಸುರಿಸಿದರು. ಬೆಂಕಿ ನಂದಿಸಿದ ಮೇಲೆ ಮಹಿಳೆಯರು, ಮಕ್ಕಳು ತಮ್ಮ ಅಸ್ತಿಪಂಜರದಂತಾದ ಕಾರ್‍ನ ಮುಂದೆ ಗೋಳಿಡುತ್ತಿದ್ದುದು ಕಂಡು ಬಂತು.

ತಮ್ಮ ನೆಚ್ಚಿನ ಕಾರ್‍ಗಳ ಪರಿಸ್ಥಿತಿ ಹೀಗಾಗಿದ್ದಕ್ಕೆ ಮುಮ್ಮಲ ಮರಗುತ್ತಿದ್ದರು. ಇದಲ್ಲದೆ ಬೆಲೆ ಬಾಳುವ ವಸ್ತುಗಳನ್ನು ಕಾರಿನಲ್ಲಿ ಇಟ್ಟಿದ್ದು ಅವುಗಳೇನಾದರೂ ಸಿಗುತ್ತವೆಯೇ ಎಂದು ಹುಡುಕಾಡುತ್ತಿದ್ದರು.

ಕೆಲವರು ಮನೆ ಕೀಗಳು, ಪಾಸ್‍ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ , ಹಣ, ಪರ್ಸ್ ಸೇರಿದಂತೆ ಇನ್ನಿತರೆ ಬೆಲೆ ಬಾಳುವ ದಾಖಲೆಗಳನ್ನು ಕೂಡ ಕಾರಿನೊಳಗೆ ಇಟ್ಟಿದ್ದರು. ಅವುಗಳಿಗಾಗಿ ಸುಟ್ಟು ಕರಕಲಾದ ಕಾರಿನಲ್ಲಿ ತಡಕಾಡುತ್ತಿರುವ ದೃಶ್ಯ ಕಂಡು ಬಂತು.

 

ತಮ್ಮ ಕಾರುಗಳು ಹೊತ್ತಿ ಉರಿಯುತ್ತಿದ್ದುದನ್ನು ಕೆಲ ಕಾರು ಮಾಲೀಕರು ಕಣ್ಣಾರೆ ಕಂಡರೆ ಕೆಲವರಿಗೆ ತಮ್ಮ ಕಾರುಗಳಿಗೆ ಏನಾಗಿದೆ ಎಂಬುದೇ ಗೊತ್ತಾಗಿಲ್ಲ. ಇನ್ನು ಕೆಲವರು ತಮ್ಮ ಕಾರುಗಳಿಗೆ ಹುಡುಕಾಟ ನಡೆಸುತ್ತಿದ್ದರು. ತಮ್ಮ ಕಾರುಗಳ ಮುಂದೆ ಬಂದು ನಿಂತು ಇದೆಯೇ ನಮ್ಮ ಕಾರು ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದುದರ ಜತೆಗೆ ಹೀಗಾಯ್ತಲ್ಲಾ ಎಂಬ ಅಳಲು ತೋಡಿಕೊಳ್ಳುತ್ತಿದ್ದರು.

ಸರಿಯಾದ ನಿರ್ವಹಣೆ ಇಲ್ಲದಿದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಯಾರು ಹೊಣೆ, ಇಷ್ಟೊಂದು ಹಣ ಕೊಟ್ಟು ಟಿಕೆಟ್ ಪಡೆದು ಕಾರ್ ನಿಲ್ಲಿಸಿ ಹೋಗಿದ್ದೆವು. ಬಂದು ನೋಡುವುದರೊಳಗೆ ಎಲ್ಲಾ ಸುಟ್ಟು ಭಸ್ಮವಾಗಿದೆ.

ಮುಂದೇನು ಮಾಡಬೇಕು ಎಂದು ತೋಚದಂತಾಗಿದೆ ಎಂದು ಹಲವರು ಸುದ್ದಿಗಾರರ ಜತೆ ನೋವನ್ನು ಹಂಚಿಕೊಂಡರು. ಕೆಲವು ಮಹಿಳೆಯರಂತೂ ಮಕ್ಕಳೊಂದಿಗೆ ತಮ್ಮ ಕಾರುಗಳ ಮುಂದೆ ನಿಂತು ಗೋಳಾಡುತ್ತಿದ್ದುದು ಕಂಡು ಮನ ಕರಗುವಂತಿತ್ತು.

Facebook Comments

Sri Raghav

Admin