ಭಾರತದ ಆರ್ಥಿಕತೆ 10 ಟ್ರಿಲಿಯನ್ ಡಾಲರ್ ತಲುಪುವ ಗುರಿ : ಪ್ರಧಾನಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.23-ಅಸಂಖ್ಯಾತ ನವೋದ್ಯಮಗಳೊಂದಿಗೆ ಭಾರತದ ಆರ್ಥಿಕತೆಯು 10 ಟ್ರಿಲಿಯನ್(ಲಕ್ಷ ಕೋಟಿ) ಡಾಲರ್ ತಲುಪುವ ಗುರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೃಷ್ಟಿಕೋನ ಬೀರಿದ್ದಾರೆ. ದೆಹಲಿಯಲ್ಲಿ ಇಂದು ಜಾಗತಿಕ ವಾಣಿಜ್ಯ ಶೃಂಗಸಭೆ(ಜಿಬಿಎಸ್)ಯಲ್ಲಿ ಮಾತನಾಡಿದ ಅವರು. ಭಾರತವನ್ನು 10 ಟ್ರಿಲಿಯನ್ ಡಾಲರ್‍ಗಳ ಆರ್ಥಿಕತೆ ತಲುಪುವ ಮತ್ತು ವಿಶ್ವದಲ್ಲೇ ತೃತೀಯ ಬೃಹತ್ ಆರ್ಥಿಕ ರಾಷ್ಟ್ರವನ್ನಾಗಿಸುವ ದೃಷ್ಟಿಕೋನವನ್ನು ತಾವು ಹೊಂದಿದ್ದೇವೆ ಎಂದರು.

ಎನ್‍ಡಿಎ ಸರ್ಕಾರದ ಭ್ರಷ್ಟಾಚಾರ ರಹಿತ ಆಳ್ವಿಕೆಯಿಂದಾಗಿ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಮತ್ತು ಬೆಳವಣಿಗೆ ಪ್ರಮಾಣ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಮೋದಿ ತಿಳಿಸಿದರು. ಭಾರತದಲ್ಲಿ ಅಸಂಖ್ಯಾತ ನವೋದ್ಯಮಗಳು ವೃದ್ಧಿಯಾಗಬೇಕು ಹಾಗೂ ವಿದ್ಯುತ್ ವಾಹನಗಳಲ್ಲಿ ಭಾರತವು ಜÁಗತಿಕ ನಾಯಕತ್ವ ಹೊಂದಬೇಕು ಎಂಬುದು ತಮ್ಮ ಬಯಕೆಯಾಗಿದೆ ಎಂದು ಪ್ರಧಾನಿ ಹೇಳಿದರು.

ತಮ್ಮ ಸರ್ಕಾರವು ಸ್ಥಗಿತಗೊಂಡಿದ್ದ ಆರ್ಥಿಕ ನೀತಿಗೆ ಚಾಲನೆ ನೀಡಿದೆ. ಏರಿಳಿತಗಳಿಂದ ಕೂಡಿದ್ದ ಹಣದುಬ್ಬರವನ್ನು ನಿಯಂತ್ರಣಕ್ಕೆ ತಂದಿದೆ ಹಾಗೂ ಚಾಲ್ತಿ ಖಾತೆ ಕೊರತೆಯನ್ನು ನಿವಾರಿಸುವಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ವಿವರಿಸಿದರು. ಕಳೆದ ನಾಲ್ಕುವರೆ ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಮತ್ತು ಸುಧಾರಣೆಗಳ ಚಿತ್ರಣವೇ ಬದಲಾಗಿದೆ. ಈ ಪರಿವರ್ತನೆಯು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿಕೊಂಡರು.

ಬಿಜೆಪಿ ನೇತೃತ್ವದ ಎನ್‍ಡಿಎ ಆಡಳಿತದಲ್ಲಿ ಉದಾರೀಕರಣ ನಂತರದ ಬೆಳವಣಿಗೆ ದರದಲ್ಲಿ ಅತ್ಯಧಿಕ ಏರಿಕೆ ಕಂಡುಬಂದಿದೆ. ಇದು ಶೇ.7.4ರಷ್ಟು ತಲುಪಿದೆ. ಹಣದುಬ್ಬರ ಶೇ.4.5ಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿದಿದೆ. ದೇಶದ ಅಧಿಕ ಸಮಗ್ರ ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆಗಾಗಿ ಸರಕುಗಳು ಮತ್ತು ಸೇವೆಗಳ ತೆರಿಗೆ(ಜಿಎಸ್‍ಟಿ) ಮತ್ತಿತರ ಸುಧಾರಣೆಗಳು ಬಲವಾದ ತಳಪಾಯ ಹಾಕಿವೆ ಎಂದು ಮೋದಿ ಬಣ್ಣಿಸಿದರು.

Facebook Comments