ಶಾಲಾ-ಕಾಲೇಜುಗಳಲ್ಲಿ ಯೋಗ ಕಡ್ಡಾಯಗೊಳಿಸಲು ಕರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಶಾಲಾ- ಕಾಲೇಜುಗಳಲ್ಲಿ ಯೋಗವನ್ನು ಕಡ್ಡಾಯಗೊಳಿ ಸುವುದರಿಂದ ಕ್ರಿಯಾಶೀಲತೆ ಹೆಚ್ಚಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಬೆಂಗಳೂರು ವಿಭಾಗದ ಜಂಟಿ ನಿರ್ದೇಶಕ ಡಾ.ಆರ್.ಕೆ.ರಮೇಶ್‍ಬಾಬು ಹೇಳಿದರು. ಬೆಂಗಳೂರು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ದಿನನಿತ್ಯದ ಜೀವನದಲ್ಲಿ ಯೋಗದ ಪಾತ್ರ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಒತ್ತಡದ ಬದುಕಿನಲ್ಲಿ ಜೀವಿಸುತ್ತಿರುವ ಎಲ್ಲರಿಗೂ ಯೋಗ ಅಗತ್ಯವಿದೆ. ದೈಹಿಕ ಚಟುವಟಿಕೆಯಿಂದ ಮನಸು ಮತ್ತು ದೇಹ ಸುಸ್ಥಿಯಲ್ಲಿರಲಿದೆ ಎಂದರು.

ಕಾಲೇಜಿನಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕಗಳಿಗೆ ಒತ್ತು ನೀಡುವ ಅಗತ್ಯವಿದೆ. ಹಾಗಾದಾಗ ಮಾತ್ರ ಒತ್ತಡವನ್ನು ಕಡಿಮೆ ಮಾಡಿಕೊಂಡು ಹೊಸ ಶಕ್ತಿ, ಚೈತನ್ಯ ರೂಢಿಸಿಕೊಳ್ಳಲು ಸಾಧ್ಯ. ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಮತ್ತು ಅಧ್ಯಾಪಕರು, ಸಿಬ್ಬಂದಿಗಳಿಗೆ ಯೋಗ ಕಡ್ಡಾಯವಾಗುವುದು ಒಳಿತು. ಇದರಿಂದ ಶಿಕ್ಷಣ ವ್ಯವಸ್ಥೆಯೇ ಚೈತನ್ಯಶೀಲವಾಗಲಿದೆ ಎಂದು ಹೇಳಿದರು.

ಯೋಗ ನಮ್ಮ ಪುರಾತನ ಕಲೆಯಾಗಿದ್ದು, ಇತ್ತೀಚೆಗೆ ವಿಶ್ವಮಾನ್ಯತೆ ಪಡೆದಿದೆ. ಜೂನ್ 21ಅನ್ನು ವಿಶ್ವ ಯೋಗ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ವ್ಯಾಸ ಸಂಸ್ಥೆಯ ಕಾರ್ಯದರ್ಶಿ ಡಾ.ಮಂಜಪ್ಪ ವಿಜಯಪುರ ಮಾತನಾಡಿ, ಜೀವನದಲ್ಲಿ ಆರೋಗ್ಯ ರೂಢಿಸಿಕೊಳ್ಳಬೇಕಾದರೆ ಹರಿ, ವರಿ, ಕರಿಗಳನ್ನು ಕಡಿಮೆ ಮಾಡಿಕೊಳ್ಳಬೇಕು.

ಆತುರ, ಆತಂಕ ಮತ್ತು ಕರಿದ ಪದಾರ್ಥಗಳಿಂದ ದೂರವಿದ್ದು ಸಿಕ್ಕಿದ್ದರಲ್ಲೇ ತೃಪ್ತಿಪಟ್ಟು ಮತ್ತಷ್ಟು ಬೇಕು ಎಂಬ ದುರಾಸೆಗೆ ಬೀಳದೆ ಹೋದರೆ ಆರೋಗ್ಯ ಉತ್ತಮವಾಗಿರುತ್ತದೆ. ದಿನನಿತ್ಯದ ಒತ್ತಡ ನಿವಾರಣೆಗೆ ಪ್ರಾಣಾಯಾಮ, ಮುದ್ರ, ಧ್ಯಾನವನ್ನು ಅಳವಡಿಸಿಕೊಂಡರೆ ಸಾಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಜೆ.ಎಸ್.ವೀಣಾ ಮಾತನಾಡಿ, ಈಗಾಗಲೇ ಯೋಗ ಮತ್ತು ವೆಲ್‍ನೆಸ್ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿ ಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದರು. ದೈಹಿಕ ಶಿಕ್ಷಣ ಅಧ್ಯಾಪಕರಾದ ಡಾ.ಬಿ. ಆನಂದ್, ಡಾ.ಕವಿತಾ, ಅನಂತಕೃಷ್ಣಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Facebook Comments