ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೇಸಿಗೆಯಲ್ಲಿ ನಾವು ಆದಷ್ಟು ಶುದ್ಧವಾಗಿರುವ ನೀರು ಹಾಗೂ ಆಹಾರ ಸೇವನೆ ಮಾಡಬೇಕು. ಆದರೆ ಕೆಲವೊಂದು ಸಲ ನಾವು ಸೇವಿಸುವಂತಹ ಆಹಾರದಿಂದಾಗಿ ನಮಗೆ ಕೆಲವೊಂದು ರೋಗಗಳು ಬರುತ್ತಲಿರುತ್ತದೆ. ಬೇಸಿಗೆಯಲ್ಲಿ ಅತಿಯಾದ ವ್ಯಾಯಾಮ ಒಳ್ಳೆಯದಲ್ಲ. ದೇಹದ ಅರ್ಧಶಕ್ತಿ ವ್ಯಯವಾಗುವಷ್ಟು ಮಾತ್ರ ವ್ಯಾಯಾಮ ಮಾಡಿ. ಜಿಮ್ ಬೇಸಿಗೆಗೆ ಒಳ್ಳೆಯದಲ್ಲ. ಸಾಧಾರಣ ನಡಿಗೆ, ಓಟ ಸಾಕು.

# ಉಷ್ಣತೆ ಹೆಚ್ಚುತ್ತಿದೆ. ಇದರಿಂದ ನಮ್ಮ ಶಕ್ತಿ ಕುಗ್ಗುತ್ತಿದೆ. ಆಯುರ್ವೇದದಲ್ಲಿ ಇದಕ್ಕೆ ‘ಆದಾನ ಕಾಲ’ ಎನ್ನುತ್ತಾರೆ. ನಮ್ಮ ಶಕ್ತಿಯನ್ನಿಲ್ಲಿ ಸೂರ್ಯ ಸೆಳೆದುಕೊಳ್ಳುತ್ತಾನೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಅತೀ ಹೆಚ್ಚು ನೀರು ಕುಡಿಯಬೇಕು. ಹಣ್ಣಿನಿಂದ ಮಾಡಿದ ಜ್ಯೂಸ್ ಹೆಚ್ಚು ಸೇವಿಸಬೇಕು. ಮನೆಯಲ್ಲೇ ತಯಾರಿಸಿ ಸೇವಿಸುವುದು ಒಳ್ಳೆಯದು.

# ಸಮಯ ನೋಡಿ, ಬಿಸಿಲು ನೋಡಿ ಹೊರಗೆ ಹೊರಡಿ. ಕಡಿಮೆ ಬಿಸಿಲಿನ ಹೊತ್ತಲ್ಲಿ ಮಾತ್ರ ಹೊರಗೆ ಓಡಾಡಿ. ಬೆಳಗ್ಗೆ 10 ರಿಂದ ಸಂಜೆ 4 ಬಿರು ಬಿಸಿಲು ಹೆಚ್ಚು ಬಾಧಿಸಬಹುದು. ಅನಿವಾರ್ಯವಾದಾಗ ತಲೆಗೆ ಟೋಪಿ ಅಥವಾ ಕೊಡೆ ಹಿಡಿದು ಹೊರ ನಡೆಯುವುದು ಒಳ್ಳೆಯದು. ಸರಳ ಹಾಗೂ ಸಡಿಲ ಉಡುಪು ಧರಿಸಿ. ಇದರಿಂದ ಗಾಳಿಯ ಓಡಾಟ ಹೆಚ್ಚುತ್ತದೆ. ಜೊತೆಗೆ ಬೇಸಿಗೆಯಲ್ಲಿ ಹೆಚ್ಚು ಕಾಡುವ ಫಂಗಲ್ ಇನ್ಫೆಕ್ಷನ್ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.

# ಅತಿಯಾದ ಕಾಫಿ, ಮದ್ಯಪಾನ, ಧೂಮಪಾನ ಮಾಡದಿದ್ದರೆ ಉತ್ತಮ. ಅಭ್ಯಾಸ ಮಾಡಿಕೊಂಡಿದ್ದರೆ ಕಡಿಮೆ ಸೇವಿಸುವುದು ಸೂಕ್ತ. ಏಕೆಂದರೆ ಆಲ್ಕೊಹಾಲ್, ಕಾಫಿಯ ಕೆಫಿನ್, ಸಿಗರೇಟಿನ ನಿಕೊಟಿನ್ ಬೇಸಿಗೆಯಲ್ಲಿ ನಮ್ಮ ದೇಹದ ಶಕ್ತಿಯನ್ನು ಕುಗ್ಗಿಸುತ್ತವೆ. ದೇಹದಲ್ಲಿ ಡ್ರೈನೆಸ್ ಹೆಚ್ಚಾಗುವಂತೆ ಮಾಡುತ್ತದೆ. ಉಳಿಂತೆ ಮಲಗುವ ಕೋಣೆ ತಣ್ಣಗಿರುವಂತೆ ನೋಡಿ ಕೊಳ್ಳಿ. ಫ್ಯಾನ್ ವಿಪರೀತ ಬಳಕೆ ಮಾಡಬೇಡಿ. ಇದರಿಂದ ಚರ್ಮ ಶುಷ್ಕವಾಗುವ ಸಾಧ್ಯತೆ ಇದೆ.

# ಹುಳಿ, ಸಕ್ಕರೆ, ಉಪ್ಪು ಮತ್ತು ಸಿಹಿ ಬೇಸಿಗೆಯಲ್ಲಿ ಹೆಚ್ಚು ಸಹಕಾರಿಯಾಗಿರುತ್ತದೆ. ನೀರಿನಲ್ಲಿ ಬೆರೆಸಿ ಇವುಗಳನ್ನು ಸೇವಿಸುವುದರಿಂದ ಶೀಘ್ರ ಶಕ್ತಿಯ ಉತ್ಪಾದನೆಯಾಗುತ್ತದೆ. ಮಜ್ಜಿಗೆಯಂಥ ಪೇಯಗಳು, ಎಳನೀರು ಸೇವನೆಯಿಂದ ಬಾಯಾರಿಕೆಗೆ ಮುಕ್ತಿ.

# ಮನಸ್ಸು ಶಾಂತವಾಗಿರಲಿ. ಉದ್ವೇಗಕ್ಕೊಳಗಾಗಬೇಡಿ. ದೀರ್ಘಕಾಲದ ಉದ್ವೇಗದ ಸಮಸ್ಯೆ ಇರುವವರು ಎಚ್ಚರಿಕೆಯಿಂದಿರಿ. ಸಕ್ಕರೆ ಖಾಯಿಲೆ, ರಕ್ತದೊತ್ತಡ ಇರುವವರೂ ಶಾಂತ ಮನಸ್ಥಿತಿ ಕಾಯ್ದುಕೊಳ್ಳಲು ಪ್ರಯತ್ನಿಸಿ. ಕೆಲವೊಮ್ಮೆ ಅತಿ ಉದ್ವೇಗದಿಂದ ಹೃದಯಾಘಾತವೂ ಆಗುವ ಸಾಧ್ಯತೆ ಇರುತ್ತದೆ.

Facebook Comments