ಚಾಮರಾಜನಗರದಲ್ಲಿ ಹಲವಾರು ಲೆಕ್ಕಾಚಾರ, `ಕೈ’ ಕೋಟೆಗೆ ಬಿಜೆಪಿ ಲಗ್ಗೆ..!

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದರೂ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಹಲವು ಆಕಾಂಕ್ಷಿ ಗಳು ಕಾತರರಾಗಿದ್ದು, ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್‍ನ ಆರ್.ಧ್ರುವನಾರಾಯಣ್ ಸಂಸದರಾಗಿ ಗೆಲುವು ಸಾಧಿಸುತ್ತಲೇ ಬರುತ್ತಿದ್ದು, ಮುಂದಿನ ಅವಧಿಗೂ ಅವರೇ ಅಭ್ಯರ್ಥಿಯಾಗಲಿದ್ದಾರೆ.

ಪ್ರಸ್ತುತ ಎದುರಾಗಲಿರುವ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ನಾಯಕರು ಯಾರನ್ನು ಅಭ್ಯರ್ಥಿಯಾಗಿ ಚಾಮರಾಜನಗರದಲ್ಲಿ ಕಣಕ್ಕಿಳಿಸುತ್ತಾರೆ ಎಂಬುದರ ಮೇಲೆ ಇಲ್ಲಿನ ರಾಜಕೀಯ ಚಟುವಟಿಕೆ ಗರಿಗೆದರಲಿದೆ. ಅಲ್ಲಿಯವರೆಗೂ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇತ್ತ ಕಾಂಗ್ರೆಸ್‍ನಿಂದ ಧೃವನಾರಾಯಣ್ ಸ್ಪರ್ಧಿಸುವುದು ಖಚಿತವಾಗಿದ್ದರೂ ಬಿಜೆಪಿಯಲ್ಲಿ ಮಾತ್ರ ಈ ಕ್ಷೇತ್ರದ ಮೇಲೆ ಹಲವು ನಾಯಕರ ಕಣ್ಣಿದೆ.

ಈಗಾಗಲೇ ಬಿಜೆಪಿಯ ಕೆಲವರು ತಾವು ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದು, ಈ ಸಂದೇಶವನ್ನು ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರಿಗೆ ರವಾನಿಸಿದ್ದಾರೆ. ಹಾಗಾಗಿ ಈ ಹಲವರಲ್ಲಿ ಯಾರಿಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಮಾಜಿ ಸಚಿವ ಹಾಗೂ ಹಿರಿಯ ನಾಯಕ ಶ್ರೀನಿವಾಸ್ ಪ್ರಸಾದ್ ಈ ಹಿಂದೆ ಹಲವು ಬಾರಿ ಈ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರೂ ಆಗಿದ್ದರು. ನಂತರ ರಾಜ್ಯ ರಾಜಕಾರಣಕ್ಕೆ ಹಿಂದಿರುಗಿದ್ದರು. ಹಾಗಾಗಿ ಈ ಭಾಗದಲ್ಲಿ ಅವರ ಪ್ರಭಾವವೂ ಹೆಚ್ಚಾಗಿಯೇ ಇದೆ ಎನ್ನಬಹುದು.

ಈ ಬಾರಿಯ ಚುನಾವಣೆಯಲ್ಲಿ ಅವರು ಯಾರನ್ನು ಸೂಚಿಸುತ್ತಾರೆ ಎಂಬುದು ಸಹ ಮುಖ್ಯವಾಗಲಿದ್ದು, ಈ ಬಾರಿ ಕೇಂದ್ರದಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯ ಬೇಕೆಂಬ ಹಠದಲ್ಲಿ ಬಿದ್ದಿರುವ ಬಿಜೆಪಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೇಲೂ ಕಣ್ಣಿಟ್ಟಿದೆ.

ಈ ಲೋಕಸಭಾ ಕ್ಷೇತ್ರ ಚಾಮರಾಜನಗರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ಹಾಗೂ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ನಂಜನಗೂಡು, ಹೆಚ್.ಡಿ.ಕೋಟೆ, ಟಿ.ನರಸೀಪುರ, ಹಾಗು ವರುಣಾ ಸೇರಿ ಒಟ್ಟು ಎಂಟು ಕ್ಷೇತ್ರಗಳನ್ನು ಒಳಗೊಂಡಿದೆ.

ಇದರಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟ ಜಾತಿ ಹಾಗೂ ಒಂದು ವಿಧಾನಸಭಾ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವುದು ವಿಶೇಷ. ಚಾಮರಾಜನಗರ ಎಸ್‍ಸಿ ಮೀಸಲು ಲೋಕಸಭಾ ಕ್ಷೇತ್ರ ಜಿಲ್ಲೆಯ ನಾಲ್ಕು ಹಾಗೂ ಮೈಸೂರು ಜಿಲ್ಲೆಯ ನಾಲ್ಕು ಸೇರಿದಂತೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

ಕರ್ನಾಟಕದ ದಕ್ಷಿಣ ಗಡಿ ಭಾಗದ ತುತ್ತ ತುದಿಯಲ್ಲಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ನಾಲ್ಕು ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಬಿಜೆಪಿ ಹಾಗೂ ಜೆಡಿಎಸ್ ಮತ್ತು ಬಿಎಸ್‍ಪಿಯಿಂದ ತಲಾ ಒಬ್ಬರು ಶಾಸಕರಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್, ಎಚ್.ಸಿ.ಮಹದೇವಪ್ಪ, ಗೀತಾ ಮಹಾದೇವ ಪ್ರಸಾದ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರಂತಹ ಪ್ರಭಾವಿ ನಾಯಕರು ಇದೇ ಕ್ಷೇತ್ರದವರಾಗಿರುವುದು ವಿಶೇಷ. ಅಲ್ಲದೆ ಈ ಕ್ಷೇತ್ರ ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದು ಒಂದು ಪ್ರಮುಖ ಅಂಶವಾಗಿದೆ.

1962ರಲ್ಲಿ ರಚನೆಗೊಂಡ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್ ಭದ್ರಕೋಟೆ. ಆದರೆ, ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮ 1996 ರಿಂದ 2004ರವರೆಗೂ ಕ್ಷೇತ್ರದಲ್ಲಿ ಜನತಾದಳ ಪ್ರಭುತ್ವ ಸ್ಥಾಪಿಸಿತ್ತು.  ಜನತಾದಳದ ಒಳಜಗಳದಿಂದಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದರಿಂದ 2009ರ ಚುನಾವಣೆಯ ನಂತರ ಕಾಂಗ್ರೆಸ್ ಚಾಮರಾಜನಗರದಲ್ಲಿ ಮತ್ತೆ ತನ್ನ ಪ್ರಭುತ್ವ ಸ್ಥಾಪಿಸುತ್ತಾ ಬಂದಿದ್ದು ಆರ್.ಧ್ರುವನಾರಾಯಣ್ ಸಂಸದರಾಗಿ ಮುಂದುವರೆದಿದ್ದಾರೆ.

ಜಾತಿವಾರು ಮತಗಳು ಸೇರಿದಂತೆ ಇತರೆ ಸುಮಾರು ಎರಡೂವರೆ ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದರೂ ಜಾತಿ ಆಧಾರದ ಮೇಲೆಯೇ ಇಲ್ಲಿಯೂ ಚುನಾವಣೆ ನಡೆಯುತ್ತದೆ. ಎಂದಿನಂತೆ ಮೇಲ್ವರ್ಗದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದರೆ, ಅಹಿಂದ ಮತಗಳು ಕಾಂಗ್ರೆಸ್ ಪಾಲಾಗಲಿವೆ. ಮೀಸಲು ಕ್ಷೇತ್ರವಾದ್ದರಿಂದ ಪರಿಶಿಷ್ಟ ಜಾತಿಯ ಮತಗಳು ಇಬ್ಭಾಗವಾಗಬಹುದು ಎಂದು ಅಂದಾಜಿಸಲಾಗಿದೆ.

ಲೋಕಸಭಾ ಚುನಾವಣೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆಯೊಂದಿಗೆ ಎದುರಿಸುತ್ತಿರುವುದರಿಂದ ಕಾಂಗ್ರೆಸ್‍ನ ಭದ್ರಕೋಟೆ, ಪ್ರಸ್ತುತ ಕಾಂಗ್ರೆಸ್ ಸಂಸದರಿರುವೆಡೆ ಸೇರಿದಂತೆ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದರೆ, ಹೊಂದಾಣಿಕೆ ತತ್ವದ ಮೇಲೆ ಜೆಡಿಎಸ್ 8 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಮೈತ್ರಿ ಪಕ್ಷಗಳನ್ನು ಲೋಕಸಭಾ ಚುನಾವಣೆಯಲ್ಲಿ ಹಿಮ್ಮೆಟ್ಟಿಸಲು ಸಿದ್ಧತೆ ನಡೆಸಿರುವ ಬಿಜೆಪಿ ಯಾವ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂಬುದರ ಮೇಲೆ ಚುನಾವಣೆ ರಂಗು ಪಡೆಯಲಿದೆ.

Facebook Comments