ನಾಳೆ ಇಂಡೋ -ಆಸಿಸ್ ಹೈವೋಲ್ಟೇಜ್ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.12- ಇಲ್ಲಿ ನಾಳೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಏಕದಿನ ಸರಣಿಯ ಕೊನೆ ನಿರ್ಣಾಯಕ ಪಂದ್ಯ ಕದನ ಕುತೂಹಲ ಕೆರಳಿಸಿದೆ. ಆತಿಥೇಯ ಮತ್ತು ಪ್ರವಾಸಿ ತಂಡಗಳು 2-2 ಗೆಲುವಿನೊಂದಿಗೆ ಸಮಬಲ ಸಾಧಿಸಿರುವುದರಿಂದ ಉಭಯ ತಂಡಗಳಿಗೂ ನಾಳೆ ಮಾಡು ಇಲ್ಲವೆ ಮಡಿ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.

ಫಿರೋಜ್‍ಷಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ನಾಳೆಯ ಹೈ ವೋಲ್ಟೇಜ್ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಉತ್ತಮ ಲಯ ಕಾಯ್ದುಕೊಂಡಿದ್ದರೂ ಭಾರತ ಭಾನುವಾರ ನಡೆದ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದ್ದರೂ ಗೆಲುವಿನ ಹೊಸ್ತಿಲಲ್ಲಿ ಎಡವಿ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡು ನಾಳೆ ಸಮಬಲದ ಪ್ರಬಲ ಆಸ್ಟ್ರೇಲಿಯಾದೊಂದಿಗೆ ಸೆಣಸಿ ಜಯ ಸಾಧಿಸಬೇಕಾಗಿರುವುದು ಅನಿವಾರ್ಯವಾಗಿದೆ.

ಕಡೇ ಪಂದ್ಯದಲ್ಲಿ ಬೌಲಿಂಗ್ ವಿಫಲತೆ, ಫೀಲ್ಡಿಂಗ್ ದೌರ್ಬಲ್ಯತೆಯಿಂದ ನರಳಿದ ಭಾರತದ ವೈಫಲ್ಯವನ್ನು ಆಸಿಸ್ ತಂಡ ಸಮರ್ಥವಾಗಿ ಬಳಸಿಕೊಂಡು ಸಮಬಲ ಸಾಧಿಸಿ ಸರಣಿ ಗೆಲ್ಲುವ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.

ಹೀಗಾಗಿ ಉಭಯ ತಂಡಗಳಿಗೂ ನಾಳಿನ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಭಾರತದ ಸ್ಟಾರ್ ಬ್ಯಾಟ್ಸ್‍ಮನ್‍ಗಳಾದ ವಿರಾಟ್ ಕೊಹ್ಲಿ, ಶಿಖರ್‍ದವನ್, ರೋಹಿತ್ ಶರ್ಮ ಅವರ ಸಿಡಿಲಬ್ಬರದ ಬ್ಯಾಟಿಂಗ್ ನಿರೀಕ್ಷೆಯಲ್ಲಿ ಇರುವ ಅಭಿಮಾನಿಗಳು ಜಸ್‍ಪ್ರೀತ್ ಬೂಮ್ರ, ಮಹಮ್ಮದ್ ಶಮಿ, ರವೀಂದ್ರ ಜಡೇಜಾ ಮತ್ತು ಭುವನೇಶ್‍ಕುಮಾರ್ ಅವರ ಉತ್ತಮ ಬೌಲಿಂಗ್ ಬಗ್ಗೆಯೂ ವಿಶ್ವಾಸ ಹೊಂದಿದ್ದಾರೆ.

ತಂಡಗಳ ವಿವರ: ಭಾರತ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ದವನ್, ರೋಹಿತ್ ಶರ್ಮ, ಅಂಬಟಿ ನಾಯ್ಡು, ಕೇದಾರ್ ಜಾದವ್, ರಿಷಬ್ ಪಂಥ್, ವಿಜಯ್‍ಶಂಕರ್, ಕುಲ್‍ದೀಪ್ ಯಾದವ್, ಜಸ್‍ಪ್ರೀತ್ ಬೂಮ್ರ, ಮೊಹಮ್ಮದ್ ಶಮಿ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್ ಮತ್ತು ಭುವನೇಶ್ವರ್ ಕುಮಾರ್.

ಆಸ್ಟ್ರೇಲಿಯಾ: ಅರೋನ್‍ಫಿಂಚ್ (ನಾಯಕ), ಉಸ್ಮಾನ್ ಖಾಜಾ, ಪೀಟರ್ ಹ್ಯಾಂಡ್ಸ್‍ಕೂಂಬ್, ಶೌನ್‍ಮಾರ್ಷ್, ಗ್ಲೆನ್ ಮ್ಯಾಕ್ಸ್‍ವೆಲ್, ಮಾರ್ಕಸ್ ಸ್ಟೋಯಿನಿಸ್, ಆಸ್ಟೋನ್ ಟರ್ನರ್, ಜೈಯಿ ರಿಚರ್ಡ್‍ಸನ್, ಆ್ಯಡಂ ಜಂಪಾ, ಆ್ಯಂಡ್ರೂ ಪೈ, ಪಾಲ್ ಕುಮಿನಿಸ್, ನಾಥನ್ ಕೌಟ್ಲರ್-ನೈಲ್, ಅಲೆಕ್ಸ್ ಕ್ಯಾರೆ, ನಾಥನ್ ಲಯೋನ್ ಮತ್ತು ಜಾಸನ್ ಬೆರೆನ್‍ಡ್ರೋಫ್.

ಪಂದ್ಯ ಆರಂಭ : ಮಧ್ಯಾಹ್ನ 1.30ಕ್ಕೆ.

Facebook Comments