ವಿಶ್ವಸಂಸ್ಥೆಯಲ್ಲಿ ಇಂದು ನಿರ್ಧಾರವಾಗಲಿದೆ ಪಾಪಿಷ್ಠ ಮಸೂದ್‍ನ ನಸೀಬ್.!

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವಸಂಸ್ಥೆ,ಮಾ.13-ಪುಲ್ವಾಮ ದಾಳಿ ಸೇರಿದಂತೆ ಅನೇಕ ವಿಧ್ವಂಸಕ ಕೃತ್ಯಗಳನ್ನು ಎಸಗಿ ಯೋಧರು- ಸಾರ್ವಜನಿಕರ ಸಾವುನೋವಿಗೆ ಕಾರಣರಾಗಿರುವ ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮತ್ತು ಕುಖ್ಯಾತ ಉಗ್ರಗಾಮಿ ಮಸೂದ್ ಅಜರ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸುವ ಸಂಬಂಧ ಇಂದು ವಿಶ್ವಸಂಸ್ಥೆ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.

ಭಾರತ ಮತ್ತು ಅದರ ಮಿತ್ರ ರಾಷ್ಟ್ರಗಳು ಈ ಕ್ಷಣಕ್ಕಾಗಿ ಕಾತುರದಿಂದ ಎದುರು ನೋಡುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಮಧ್ಯಾಹ್ನ 3 ಗಂಟೆಗೆ(ಭಾರತೀಯ ಕಾಲಮಾನ ಮಧ್ಯರಾತ್ರಿ 12.30) ಈ ಸಂಬಂಧ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದು, ಮುಂದಿನ ಬೆಳವಣಿಗೆ ತೀವ್ರ ಕುತೂಹಲ ಕೆರಳಿಸಿದೆ.

ಅಜರ್‍ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿ ಅಂತಾರಾಷ್ಟ್ರೀಯ ಉಗ್ರಗಾಮಿ ಎಂಬ ಪಟ್ಟಿಗೆ ಸೇರಿಸುವಂತೆ ಭಾರತ, ಅಮೆರಿಕ, ಫ್ರಾನ್ಸ್ ಮತ್ತು ಇಂಗ್ಲೆಂಡ್ ಸಲ್ಲಿಸಿರುವ ಪ್ರಸ್ತಾಪ ಕುರಿತು ಭದ್ರತಾ ಮಂಡಳಿ ನಿರ್ಧಾರ ಕೈಗೊಳ್ಳಲಿದೆ.

ಅಜರ್‍ನನ್ನು ಜಾಗತಿಕ ಉಗ್ರನೆಂಬ ಪಟ್ಟಿಗೆ ಸೇರಿಸುವಂತೆ ಈ ಹಿಂದೆ ಭಾರತ ಮತ್ತು ಅದರ ಮಿತ್ರ ರಾಷ್ಟ್ರಗಳು ಮೂರಕ್ಕೂ ಹೆಚ್ಚು ಬಾರಿ ಸಲ್ಲಿಸಿದ್ದ ಪ್ರಸ್ತಾವನೆಗೆ ಪಾಕಿಸ್ತಾನದ ಪರಮ ಮಿತ್ರ ರಾಷ್ಟ್ರ ಚೀನಾ ಅಡ್ಡಗಾಲಾಗಿತ್ತು. ಈಗ ಚೀನಾ ಕೈಗೊಳ್ಳುವ ಮುಂದಿನ ನಿರ್ಧಾರದ ಬಗ್ಗೆ ಕುತೂಹಲ ಕೆರಳಿಸಿದೆ.

ಪುಲ್ವಾಮ ಘಟನೆಯನ್ನು ಚೀನಾ ಖಂಡಿಸಿ ಭಯೋತ್ಪಾದಕರ ವಿದ್ವಂಸಕ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬೀಜಿಂಗ್ ಇಂದಿನ ಸಭೆಯಲ್ಲಿ ನಿರ್ಣಯದ ಪರ ಮತ ಚಲಾಯಿಸುವ ಆಶಾಭಾವನೆಯೂ ಇದೆ.

ಇದೇ ವೇಳೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾ ಈ ಬಗ್ಗೆ ತಾನು ಇನ್ನು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಉನ್ನತ ಮಟ್ಟದಲ್ಲಿ ಈ ಸಂಬಂಧ ಚರ್ಚೆಗಳು ನಡೆದಿವೆ ಎಂದು ತಿಳಿಸಿದೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸುವುದು ಅತ್ಯುತ್ತಮ ಪರಿಹಾರ ಮಾರ್ಗ ಎಂದು ಕೂಡ ಬೀಜಿಂಗ್ ಸಲಹೆ ಮಾಡಿದೆ.

ಚೀನಾ ಈ ನಿಟ್ಟಿನಲ್ಲಿ ಪೂರಕ ನಿರ್ಧಾರ ಕೈಗೊಂಡರೆ ಅದು ಭಾರತಕ್ಕೆ ಈ ಬಾರಿ ದೊಡ್ಡ ಜಯ ಲಭಿಸಲಿದ್ದು, ಪಾಕಿಸ್ತಾನಕ್ಕೆ ಭಾರೀ ಹಿನ್ನಡೆಯೊಂದಿಗೆ ತೀವ್ರ ಮುಖಭಂಗವಾಗಲಿದೆ. ಒಟ್ಟಾರೆ ಭದ್ರತಾ ಮಂಡಳಿಯ ನಿರ್ಧಾರದತ್ತ ವಿಶ್ವದ ವಿವಿಧ ರಾಷ್ಟ್ರಗಳ ದೃಷ್ಟಿ ನೆಟ್ಟಿದೆ.

Facebook Comments