ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ‘ಅರಬ್ಬಿ ಕಡಲ ತೀರದಲ್ಲಿ’ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಮತ್ತೊಂದು ನೈಜ ಘಟನೆ ಆಧಾರಿತ ಚಿತ್ರ ಬಿಡುಗಡೆಗೊಳ್ಳುತ್ತಿದೆ. 2016ರ ಕೊಯಮತ್ತೂರಿನಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ಅರಬ್ಬಿ ಕಡಲ ತೀರದಲ್ಲಿ ಎಂಬ ಚಿತ್ರವು ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಚಿತ್ರದ ಕಥಾನಾಯಕ ಮಾಡಲ್ ಕ್ಷೇತ್ರದಲ್ಲಿ ಛಾಯಾಗ್ರಾಹಕನಾಗಿ ಹೆಸರು ಮಾಡಿದ್ದು, ವಯಸ್ಸು ಮೀರಿದ್ದರೂ ಮದುವೆ ಆಗಿರುವುದಿಲ್ಲ.

ಕಡಲ ತೀರದಲ್ಲಿ ಅಪ್ಪನ ಭವ್ಯ ಬಂಗಲೆಯ ಅಧಿಪತಿಯಾಗಿದ್ದರೂ ಅಲ್ಲಿಗೆ ಹೋಗದೆ ವೃತ್ತಿಯಲ್ಲಿ ತೊಡಗಿಕೊಂಡಿರುತ್ತಾನೆ. ಒಮ್ಮೆ ತಾನು ಮೆಚ್ಚಿದ ಹುಡುಗಿಗೆ ತಾಳಿ ಕಟ್ಟುವ ಮುನ್ನವೆ ಕೊಲೆಯಾಗುತ್ತಾಳೆ.

ಮುಂದೆ ಖಿನ್ನತೆಗೆ ಒಳಗಾಗಿ ಮಾನಸಿಕ ರೋಗಿಯೆಂದು ವ್ಯವಸ್ಥೆಯಲ್ಲಿ ಬಿಂಬಿತವಾಗುತ್ತಾನೆ. ಇದರಿಂದ ಹೊರಬರಲು ಹೊಸ ಬದುಕನ್ನು ಕಟ್ಟಿಕೊಳ್ಳಲು ಮತ್ತೊಂದು ಹುಡುಗಿಯ ಪ್ರವೇಶವಾಗುತ್ತದೆ. ಆಕೆಯೊಂದಿಗೆ ಚಂದದ ಬದುಕು ಕಟ್ಟಿಕೊಂಡು ಸುಖ ಜೀವನ ನಡೆಸುವ ಸಂಭ್ರಮದಲ್ಲಿ ಇರುವಾಗಲೇ ನಂಬಲು ಸಾಧ್ಯವಾಗದ ಘಟನೆಯೊಂದು ಶುರುವಾಗಿ ಗೊಂದಲಗಳು ಹುಟ್ಟಿಕೊಳ್ಳುತ್ತವೆ. ಅವೆಲ್ಲವು ಏನು ಎಂಬುದು ಸಿನಿಮಾದಲ್ಲಿ ತೋರಿಸಲಾಗಿದೆ.

ಬಣ್ಣದ ಹೆಜ್ಜೆ ನಿರ್ಮಾಣ ಮಾಡಿ ಅಂದಿಗೆ 60 ಲಕ್ಷ ಕಳೆದುಕೊಂಡಿದ್ದ ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ದೀರ್ಘ ಕಾಲದ ಗ್ಯಾಪ್ ನಂತರ ಹಣ ಹೂಡುವುದರ ಜೊತೆಗೆ ಪೋಟೋಗ್ರಾಫರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪತ್ರಕರ್ತೆಯಾಗಿ ವೈಷ್ಣವಿ ಮತ್ತು ಮಾಡೆಲ್ ಪಾತ್ರದಲ್ಲಿ ಹೊಸ ಪ್ರತಿಭೆ ರಂಜಿತಾ ನಾಯಕಿಯರು.

ಉಳಿದಂತೆ ರಮೇಶ್‍ಭಟ್, ಮನೆ ಕೆಲಸದವನಾಗಿ ಮತ್ತು ಯಕ್ಷಗಾನಕ್ಕೆ ಹೆಜ್ಜೆ ಹಾಕಿರುವ ಸುಂದರ್, ಬಿರಾದಾರ್ ಹಾಗೂ ಹಿರಿಯ ಸಿನಿಮಾ ಪತ್ರಕರ್ತ ಸ್ನೇಹಪ್ರಿಯ ನಾಗರಾಜ್ ರೀಲ್‍ನಲ್ಲೂ ಅದೇ ರೀತಿಯ ಪಾತ್ರಕ್ಕೆ ಮೊದಲ ಬಾರಿ ನಟನೆ ಮಾಡಿರುವುದು ವಿಶೇಷ.

ಅನುರಾಗ ಸಂಗಮ, ಮದುವೆ ಇನ್ನು ಅನೇಕ ಸದುಭಿರುಚಿಯ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ವಿ.ಉಮಾಕಾಂತ್ ಇಂದಿನ ಯುವಕರೇ ನಾಳಿನ ಪ್ರಜೆಗಳು ಎನ್ನುವಂತೆ 16ನೇ ಚಿತ್ರಕ್ಕೆ ರಚನೆ. ನಿರ್ದೇಶನ ಮಾಡಿದ್ದಾರೆ. ಕಡಲತೀರದ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾಗಿದ್ದು, ಒಂದು ಹಾಡಿಗೆ ಸಂಗೀತ ಒದಗಿಸಿರುವ ಎ.ಟಿ.ರವೀಶ್ ರೀರೆರ್ಕಾಡಿಂಗ್ ಮಾಡಿದ್ದಾರೆ. ಒಟ್ಟಾರೆ ಕುತೂಹಲಭರಿತವಾದ ಈ ಚಿತ್ರವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ನೋಡಬೇಕು.

arabi

Facebook Comments