ಚರಣರಾಜ್ ಅಭಿನಯಿಸಿರುವ ‘ರಾಜಣ್ಣನ ಮಗ’ ಚಿತ್ರ ಈ ವಾರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಸ್ಯಾಂಡಲ್‍ವುಡ್‍ಗೆ ಮತ್ತೊಮ್ಮೆ ಅದ್ಧೂರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ ಈ ನಟ. ಈ ಹಿಂದೆ ಬಿಡುಗಡೆಯಾಗಿದ್ದ ಜಸ್ಟ್ ಮದ್ವೇಲಿ ಚಿತ್ರದ ಮೂಲಕ ಹರೀಶ್ ಜಲಗೆರೆ ನಾಯಕನಾಗಿ ಎಂಟ್ರಿ ಕೊಟ್ಟಿದ್ದರು. ಈಗ ರಾಜಣ್ಣನ ಮಗನಾಗಿ ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಕೋಲಾರ ಸೀನ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಅಕ್ಷತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ನಟ ಚರಣರಾಜ್ ನಾಯಕನ ತಂದೆ ರಾಜಣ್ಣನ ಪಾತ್ರ ನಿರ್ವಹಿಸಿದ್ದಾರೆ. ತಂದೆ ಮಗನ ಬಾಂಧವ್ಯದ ಸುತ್ತ ಸಾಗುವ ಕಥೆ ಹೊಂದಿರುವ ಈ ಚಿತ್ರದಲ್ಲಿ ತನ್ನ ತಂದೆಯ ಪ್ರೀತಿಗಾಗಿ ಪರಿತಪಿಸುವ ಮಗನಾಗಿ ಹರೀಶ್ ಕಾಣಿಸಿಕೊಂಡಿದ್ದಾರೆ.

ಚಿತ್ರದ ನಾಯಕ ಹಾಗೂ ಖಳನಾಯಕ ಕೂಡ ಅವರೇ ಆಗಿರುವುದು ಈ ಚಿತ್ರದ ವಿಶೇಷ. ಡಿಫರೆಂಡ್ ಡ್ಯಾನಿ ಅವರ ಸಾಹಸ ಸಂಯೋಜನೆಯ ಮೈ ಝುಂ ಎನಿಸುವ ಫೈಟ್‍ಗಳನ್ನು ನಾಯಕ ಹರೀಶ್ ನಿರ್ವಹಿಸಿದ್ದಾರೆ. ಇನ್ನು ಈ ಚಿತ್ರದ ರಾಜಣ್ಣನ ಪಾತ್ರದಲ್ಲಿ ಹಿರಿಯನಟ ಚರಣ್‍ರಾಜ್ ಅವರು ನಟಿಸಿದ್ದಾರೆ. ಮೊನ್ನೆ ಈ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಲಾಯಿತು.

ನಿರ್ದೇಶಕ ಕೋಲಾರ ಸೀನ ಮಾತನಾಡಿ, ಈ ವಾರ ನಮ್ಮ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಿಂದೆ ಬಿಟ್ಟ ಟ್ರೈಲರ್‍ನಲ್ಲಿ ನಾಯಕನ ಫೇಸ್ ತೋರಿಸಿದ್ದಿಲ್ಲ. ಈಗ ರಿವೀಲ್ ಮಾಡಿದ್ದೇವೆ. ಜಸ್ಟ್ ಮದ್ವೇಲಿ ಸಮಯದಲ್ಲೇ ಅಂದುಕೊಂಡ ಚಿತ್ರವಿದು. ಚರಣರಾಜ್ ಅವರಿಗೆ ಈ ಕಥೆ ಹೇಳಿದಾಗ ತುಂಬಾ ಇಷ್ಟಪಟ್ಟರು. ಸಿನಿಮಾ ಇಷ್ಟು ಚೆನ್ನಾಗಿ ಬಂದಿರುವುದಕ್ಕೆ ಟೀಮ್ ವರ್ಕ್ ಕಾರಣ ಎಂದು ಚಿತ್ರದ ಕುರಿತಂತೆ ಸಂಕ್ಷಿಪ್ತವಾಗಿ ಹೇಳಿದರು.

ನಂತರ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ನಟ ಚರಣ್‍ರಾಜ್ ಮಾತನಾಡಿ, ಈ ಚಿತ್ರದಲ್ಲಿ ರಾಜ್ ಅವರ ಹೆಸರು ಇರುವುದೇ ಚಿತ್ರವನ್ನು ಅರ್ಧ ಗೆಲ್ಲಿಸಿದೆ. ಅವರ ಹೆಸರಿನ ಪಾತ್ರದಲ್ಲಿ ನಾನು ಕಾಣಿಸಿಕೊಂಡಿರುವುದು ನಿಜಕ್ಕೂ ನನ್ನ ಅದೃಷ್ಟ. ನಾನು ನಟಿಸುವಾಗ ಅವರು ನನ್ನ ಕಣ್ಮುಂದೆಯೇ ಬಂದಂತೆ ಆಗುತ್ತಿತ್ತು.

ನನಗೆ ರಾಜಣ್ಣನ ಮಗ ಚಿತ್ರದ ಮೇಲೆ 100% ನಂಬಿಕೆ ಇದೆ ಎಂದು ಹೇಳಿದರು. ಚಿತ್ರದ ನಾಯಕ ಮತ್ತು ನಿರ್ಮಾಪಕರೂ ಆದ ಹರೀಶ್ ಜಲಗೆರೆ ಮಾತನಾಡಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕರು ಅಂದುಕೊಂಡ ಹಾಗೆ ಚಿತ್ರವನ್ನು ತೆರೆಮೇಲೆ ತಂದಿದ್ದಾರೆ. ಚಿತ್ರದಲ್ಲಿ 6 ಫೈಟ್ಸ್ ಇದ್ದರೂ ವಿಭಿನ್ನವಾಗಿ ಮೂಡುಬಂದಿವೆ.ಮಾಸ್ ಕ್ಲಾಸ್ ಎಲ್ಲಾ ವರ್ಗದ ಜನರಿಗೂ ಚಿತ್ರ ಇಷ್ಟವಾಗುವಂತಿದೆ ಎಂದು ಹೇಳಿದರು. ಈ ಚಿತ್ರದ ನಾಲ್ಕು ಹಾಡುಗಳಿಗೆ ರವಿ ಬಸ್ರೂರು ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರಮೋದ್ ಆರ್. ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಇನ್ನು ನಟ ಕರಿಸುಬ್ಬು ಅವರು ಈ ಚಿತ್ರದ ಮತ್ತೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ರಾಜುರೆಡ್ಡಿ ಈ ಚಿತ್ರದ ಖಳನಾಯಕನಾಗಿ ಅಭಿನಯಿಸಿದ್ದಾರೆ. ಕುರಿರಂಗ ನಾಯಕನ ಸ್ನೇಹಿತನಾಗಿ ಪಾತ್ರ ನಿರ್ವಹಿಸಿದ್ದಾರೆ. ನಿರೀಕ್ಷೆಯಂತೆ ಸಿದ್ಧಗೊಂಡಿರುವ ಈ ಚಿತ್ರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.

Facebook Comments