ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ.ಸುರೇಶ್ ವಿರುದ್ಧ ತೊಡೆತಟ್ಟುವರೇ ಸಿ.ಪಿ.ಯೋಗೀಶ್ವರ್..?

ಈ ಸುದ್ದಿಯನ್ನು ಶೇರ್ ಮಾಡಿ

ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಂತಿ ರುವ ನಗರ ಹಾಗೂ ಗ್ರಾಮೀಣ ಪ್ರದೇಶ ಒಳಗೊಂಡಿರುವ ವಿಭಿನ್ನ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ತೀವ್ರ ಕುತೂಹಲ ಕೆರಳಿಸಿದೆ. ಜೆಡಿಎಸ್-ಕಾಂಗ್ರೆಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಈ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದೆ. ನಿರೀಕ್ಷೆಯಂತೆ ಹಾಲಿ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್‍ನ ಅಭ್ಯರ್ಥಿಯಾಗಲಿದ್ದಾರೆ. ಪ್ರತಿಸ್ಪರ್ಧಿ ಯಾರಾಗಲಿದ್ದಾರೆ ಎಂಬ ಕುತೂಹಲ ತೀವ್ರವಾಗಿದೆ.

ಇತ್ತೀಚೆಗೆ ಕಾಂಗ್ರೆಸ್‍ನ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಈ ಕ್ಷೇತ್ರ ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ಈ ಕ್ಷೇತ್ರದ ಪ್ರಜ್ಞಾವಂತ ಮತದಾರರ ಆಯ್ಕೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಎಡೆಮಾಡಿಕೊಡುತ್ತದೆ. ಅಷ್ಟೇ ಅಲ್ಲ, ರಾಜಕೀಯವಾಗಿಯೂ ಗಮನ ಸೆಳೆಯುತ್ತದೆ. ಕ್ಷೇತ್ರ ಪುನರ್ವಿಂಗಣೆಗೂ ಮುನ್ನ ಈ ಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರವಾಗಿದ್ದು, ದೇಶದ ಅತಿ ದೊಡ್ಡ ಕ್ಷೇತ್ರವೆಂದೇ ಬಿಂಬಿತವಾಗಿತ್ತು.

ಮಲೆ ಮಹದೇಶ್ವರ ಬೆಟ್ಟದಿಂದ ಶಿವಗಂಗಾ ಬೆಟ್ಟದವರೆಗೂ ಭೌಗೋಳಿಕ ವಿಸ್ತಾರ ಹೊಂದಿತ್ತು.ಮಾಜಿ ಸಂಸದ ದಿ.ಎಂ.ವಿ. ಚಂದ್ರಶೇಖರ ಮೂರ್ತಿ ಈ ಕ್ಷೇತ್ರದಲ್ಲಿ ಸತತ ಗೆಲುವು ಸಾಧಿಸಿದ್ದರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸೋತ ನಂತರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕನಕಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಇದೇ ಕ್ಷೇತ್ರವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೂ ಪ್ರತಿನಿಧಿಸಿದ್ದರು. ಹೀಗೆ ಹಲವಾರು ಘಟಾನುಘಟಿ ನಾಯಕರು ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಭೌಗೋಳಿಕವಾಗಿಯೂ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾದವು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿ ಚುನಾಯಿತರಾಗಿದ್ದರು. ನಂತರ ಡಿ.ಕೆ.ಸುರೇಶ್ ಅವರು ಈ ಕ್ಷೇತ್ರದಲ್ಲಿ ನಿರಂತರ ಗೆಲುವು ಸಾಧಿಸುತ್ತ ಬಂದಿದ್ದು, ಕಾಂಗ್ರೆಸ್‍ನ ಭದ್ರಕೋಟೆ ಎಂದೇ ಬಿಂಬಿತವಾಗಿದೆ.

ಈ ಕ್ಷೇತ್ರದಲ್ಲಿನ ಕಾಂಗ್ರೆಸ್ ಪ್ರಾಬಲ್ಯವನ್ನು ಮುರಿಯಬೇಕೆಂಬ ಛಲ ತೊಟ್ಟಿರುವ ಬಿಜೆಪಿ ಈಗಾಗಲೇ ಹಲವಾರು ಚುನಾವಣಾ ತಂತ್ರಗಾರಿಕೆ ನಡೆಸತೊಡಗಿದೆ.
ಪ್ರತಿ ಬಾರಿ ಚುನಾವಣೆಯಲ್ಲೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಏರ್ಪಡುತ್ತಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಿತ್ರ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ.ಸುರೇಶ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಕಣಕ್ಕಿಳಿಯುವುದು ನಿಶ್ಚಿತ.

ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ವಿಧಾನಸಭಾ ಕ್ಷೇತ್ರಗಳಾದ ಕನಕಪುರ, ರಾಜರಾಜೇಶ್ವರಿ ನಗರ, ಆನೇಕಲ್, ಕುಣಿಗಲ್‍ನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನು ರಾಮನಗರ, ಚನ್ನಪಟ್ಟಣ, ಮಾಗಡಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದರೆ, ಇದು ಇಡೀ ರಾಜ್ಯದಲ್ಲೇ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವೆಂಬ ಹೆಗ್ಗಳಿಕೆಯೂ ಇದ್ದು, ಸುಮಾರು 6 ಲಕ್ಷಕ್ಕೂ ಹೆಚ್ಚು ಮತದಾರರು ಈ ಒಂದೇ ಕ್ಷೇತ್ರದಲ್ಲಿ ಇರುವುದು ವಿಶೇಷ. ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದ್ದು , ಇದಕ್ಕೆ ಹಲವು ಸ್ಥಳೀಯ ಮುಖಂಡರ ಬೆಂಬಲ ವ್ಯಕ್ತವಾಗಿದೆ.

ರಾಜ್ಯ ನಾಯಕರು ಕೂಡ ಪ್ರಬಲ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಯೋಗೇಶ್ವರ್ ಸ್ಪರ್ಧಿಸುವಂತೆ ಮನವೊಲಿಸುವ ಪ್ರಯತ್ನಗಳು ಕೂಡ ನಡೆದಿವೆ.
ಕ್ಷೇತ್ರದಲ್ಲಿ ಲಿಂಗಾಯತ, ಒಕ್ಕಲಿಗ ಹಾಗೂ ಅಲ್ಪಸಂಖ್ಯಾತ ಮತಗಳು ಹೆಚ್ಚಾಗಿದ್ದು , ಇದರ ನಡುವೆ ಹಿಂದುಳಿದ ವರ್ಗಗಳ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ.

ರಾಜ್ಯದ ಮುಖ್ಯಮಂತ್ರಿ ಯಾಗಿರುವ ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಚನ್ನಪಟ್ಟಣವೂ ಕೂಡ ಈ ಕ್ಷೇತ್ರ ವ್ಯಾಪ್ತಿಗೆ ಬರುತ್ತಿರುವುದರಿಂದ ನಿರೀಕ್ಷೆಯಂತೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ.

ವಿಧಾನಸಭಾ ಚುನಾವಣೆ ನಂತರ ಬದಲಾಗಿರುವ ರಾಜಕೀಯ ಸನ್ನಿವೇಶಗಳಲ್ಲಿ ಬಿಜೆಪಿ ಈಗ ಹಲವು ಚಾಣಾಕ್ಷ ನಡೆ ಅನುಸರಿಸುತ್ತಿದ್ದು, ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ಸ್ಥಳೀಯ ಮುಖಂಡರಾದ ಎಚ್.ಎಂ.ಕೃಷ್ಣಮೂರ್ತಿ ಸೇರಿದಂತೆ ಹಲವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಭಾರೀ ಪ್ರಯಾಸ ನಡೆಸುತ್ತಿದೆ. ರಾಮನಗರ, ಕನಕಪುರ ಭಾಗದಲ್ಲಿ ಕಾಂಗ್ರೆಸ್-ಜೆಡಿಎಸ್ ಬಲಿಷ್ಠವಾಗಿದ್ದು , ಇಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಲು ಸ್ಥಳೀಯ ನಾಯಕರಲ್ಲಿ ಒಗ್ಗಟ್ಟು ಮೂಡಿಸಲು ಪ್ರಯತ್ನ ನಡೆಸಿದ್ದಾರೆ.

ಇತ್ತೀಚೆಗೆ ಜಿಲ್ಲೆಯ ಉಸ್ತುವಾರಿ ಹೊತ್ತಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೆಲವೊಂದು ಘಟನೆಗಳಿಂದ ಮುನಿಸಿಕೊಂಡಿರುವುದು ಕಮಲ ಪಾಳಯಕ್ಕೆ ಆತಂಕ ಮೂಡಿಸಿದೆ. ಒಟ್ಟಾರೆ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಭದ್ರವಾ ಗಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ನಡೆಸುವ ಕಾರ್ಯತಂತ್ರ ಕುತೂಹಲ ಕೆರಳಿಸಿದೆ.

Facebook Comments