ಕರ್ತಾರ್ಪುರ್ ಕಾರಿಡಾರ್ ಯೋಜನೆ ಕುರಿತು ಭಾರತ-ಪಾಕ್ ಮಹತ್ವದ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಅಟ್ಟಾರಿ(ಅಮೃತಸರ್), ಮಾ.14- ಪಾಕಿಸ್ತಾನದ ಕರ್ತಾರ್ಪುರ್ ಪಟ್ಟಣ-ಪಂಜಾಬ್‍ನ ಗುರುದಾಸ್ಪುರ್ ಜಿಲ್ಲೆಯ ನಡುವೆ ಗುರುದ್ವಾರ ದರ್ಬಾರ್ ಸಾಹೀಬ್‍ಗೆ ಸಂಪರ್ಕ ಕಲ್ಪಿಸಲು ಕಾರಿಡಾರ್(ಹೆದ್ದಾರಿ) ಸ್ಥಾಪಿಸುವ ಕುರಿತು ಚರ್ಚಿಸಲು ಭಾರತ-ಪಾಕ್ ಅಧಿಕಾರಿಗಳ ನಡುವೆ ಇಂದು ಮಹತ್ವದ ಚರ್ಚೆ ನಡೆಯಿತು.

ಅಮೃತಸರ್‍ನ ಅಟ್ಟಾರಿ ಪ್ರದೇಶದಲ್ಲಿರುವ ಅಟ್ಟಾರಿ-ವಾಘಾ ಗಡಿಯಲ್ಲಿ ಇಂದು ನಡೆದ ಸಭೆಯಲ್ಲಿ ಕರ್ತಾರ್ಪುರ್ ಕಾರಿಡಾರ್ ಯೋಜನೆ ಕುರಿತು ಉಭಯ ದೇಶಗಳ ಅಧಿಕಾರಿಗಳು ಸಮಾಲೋಚನೆ ನಡೆಸಿದರು.

ಫೆ. 14ರ ಪುಲ್ವಾಮಾ ಭಯೋತ್ಪಾದಕರ ದಾಳಿಗೆ ಸರಿಯಾಗಿ ಒಂದು ತಿಂಗಳ ಬಳಿಕ ಭಾರತ-ಪಾಕ್ ನಡುವೆ ನಡೆಯುತ್ತಿರುವ ಈ ಸಭೆ ಭಾರೀ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಭೆಯ ಸಂದರ್ಭದಲ್ಲಿ ಕರ್ತಾರ್ಪುರ್ ಕಾರಿಡಾರ್ ಯೋಜನೆ ಬಗ್ಗೆ ಈ ಹಿಂದೆ ಪಾಕಿಸ್ತಾನ ನಡೆದುಕೊಂಡ ಕ್ರಮದ ಬಗ್ಗೆ ಭಾರತದ ಅಧಿಕಾರಿಗಳು ಸಭೆಯಲ್ಲಿ ತೀವ್ರ ಆಕ್ಷೇಪಗಳನ್ನು ವ್ಯಕ್ತಪಡಿಸಿದರೆಂದು ಉನ್ನತ ಮೂಲಗಳು ತಿಳಿಸಿವೆ.

ಈ ಹಿಂದೆ ಕರ್ತಾರ್ಪುರ್‍ನ ಗುರುದ್ವಾರ ದರ್ಬಾರ್ ಸಾಹೀಬ್ ಮಂದಿರಕ್ಕೆ ತೆರಳಿದ್ದ ಭಾರತೀಯರಿಗೆ ಪಾಕಿಸ್ತಾನದ ಅಧಿಕಾರಿಗಳು ಅಡ್ಡಿಪಡಿಸಿ ಕಿರುಕುಳ ನೀಡಿದ್ದನ್ನು ಭಾರತ ಪ್ರಮುಖವಾಗಿ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು ಎಂದು ಮೂಲಗಳು ತಿಳಿಸಿವೆ. ಸಿಖ್ ಯಾತ್ರಾರ್ಥಿಗಳಿಗೆ ಈ ಮಂದಿರಕ್ಕೆ ತೆರಳಲು ಯಾವುದೇ ತೊಂದರೆಯಾಗದಂತೆ ಮುಕ್ತ ಅವಕಾಶ ನೀಡಬೇಕು.

ಇದಕ್ಕಾಗಿ ಕರ್ತಾರ್ಪುರ್ ಕಾರಿಡಾರ್ ಯೋಜನೆ ಅನುಷ್ಠಾನಗೊಳ್ಳಲು ಪಾಕಿಸ್ತಾನ ಸಂಪೂರ್ಣ ಸಹಕಾರ ನೀಡಬೇಕು ಎಂಬುದನ್ನು ಭಾರತದ ಅಧಿಕಾರಿಗಳು ಸಭೆಯಲ್ಲಿ ಮತ್ತೊಮ್ಮೆ ಬಲವಾಗಿ ಪ್ರತಿಪಾದಿಸಿದರು.

ಕೇಂದ್ರ ಗೃಹಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಬಿಎಸ್‍ಎಫ್, ಭಾರತ ರಾಷ್ಟೀಯ ಹೆದ್ದಾರಿಗಳ ಪ್ರಾಧಿಕಾರ ಮತ್ತು ಪಂಜಾಬ್ ಸರಕಾರದ ಉನ್ನತ ಅಧಿಕಾರಿಗಳು ಭಾರತದ ಪರ ಸಭೆಯಲ್ಲಿ ಹಾಜರಿದ್ದರು.
ಪಾಕಿಸ್ತಾನದ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಇಸ್ಲಾಮಾಬಾದ್ ನ್ನು ಪ್ರತಿನಿಧಿಸಿದ್ದರು.

Facebook Comments