ಕೆಜಿಎಫ್ ಚಾಪ್ಟರ್-2 ಶುರು

ಈ ಸುದ್ದಿಯನ್ನು ಶೇರ್ ಮಾಡಿ

ವಿಶ್ವದಾದ್ಯಂತ ತನ್ನ ಛಾಪು ಮೂಡಿಸಿದಂತಹ ಚಿತ್ರ ಕೆಜಿಎಫ್. ಈಗ ಮತ್ತೊಮ್ಮೆ ಭರ್ಜರಿಯಾಗಿ ಸದ್ದು ಮಾಡಲು ಸಿದ್ಧವಾಗುತ್ತಿದೆ. ರಾಕಿಂಗ್‍ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2ಗೆ ಈಗ ಚಾಲನೆ ದೊರೆತಿದೆ. ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬಂದಿದ್ದ ಕೆಜಿಎಫ್ ಸಿನಿಮಾ ಇಡೀ ಭಾರತ ಅಲ್ಲದೆ ವಿಶ್ವದಾದ್ಯಂತ ಹೊಸ ದಾಖಲೆಯನ್ನೇ ಬರೆದಿತ್ತು.

ಈ ಚಿತ್ರದ ತಾಂತ್ರಿಕ ಶ್ರೀಮಂತಿಕೆ, ಕ್ರಿಯಾಶೀಲತೆ, ಕಲಾವಿದರ ನೈಪುಣ್ಯತೆಯನ್ನು ಕಂಡು ಎಲ್ಲರೂ ಬೆರಗಾಗಿದ್ದರು.ಚಿತ್ರಮಂದಿರಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಚಿತ್ರಕ್ಕೆ ಅಭೂತಪೂರ್ವ ಯಶಸ್ಸು ದೊರೆತಿತ್ತು.

ಇಂತಹ ಕೆಜಿಎಫ್ ಚಿತ್ರವನ್ನು ಅಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ದಿದ್ದ ನಿರ್ಮಾಪಕ ವಿಜಯ ಕಿರಗಂದೂರು ಅವರ ನಿರ್ಮಾಣದಲ್ಲಿ ಕೆಜಿಎಫ್ ಚಾಪ್ಟರ್-2 ಮುಹೂರ್ತ ಆಚರಿಸಿಕೊಂಡಿದೆ.ವಿಜಯನಗರದ ಕೋದಂಡರಾಮಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಪೂಜೆ ನೆರವೇರಿಸಿಕೊಂಡು ತದನಂತರ ಕಂಠೀರವ ಸ್ಟುಡಿಯೋದಲ್ಲಿ ಮುಹೂರ್ತ ಸಮಾರಂಭ ಹಮ್ಮಿಕೊಂಡಿತ್ತು.

ನಿರ್ದೇಶಕ ಪ್ರಶಾಂತ್ ನೀಲ್ ರವರ ತಾಯಿ ಭಾರತಿ ಸುಭಾóಷ್ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕ ವಿಜಯ್ ಕಿರಗಂದೂರು ಅವರ ಸಹೋದರ ಮಂಜಣ್ಣ ಕ್ಲಾಪ್ ಮಾಡಿದರು.ಕೆಜಿಎಫ್ ಚಾಪ್ಟರ್-2 ಚಿತ್ರ ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

ಪ್ರಶಾಂತ್ ನೀಲ್ ಕಥೆ ಚಿತ್ರಕಥೆ, ನಿರ್ದೇಶನ, ಸಂಭಾಷಣೆ ಪ್ರಶಾಂತ್ ನೀಲ್, ಚಂದ್ರಮಳಿ, ಕೆ.ಭುವನ್ ಛಾಯಾಗ್ರಹಣ, ರವಿ ಬಸ್ರೂರ್ ಸಂಗೀತ, ಶಿವಕುಮಾರ್ ಕಲಾ ನಿರ್ದೇಶನ ವಿರುವ ಈ ಚಿತ್ರಕ್ಕೆ ಕಾರ್ತಿಕ್ ಮತ್ತು ರಾಮರಾವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ, ಚಂಪಕಧಾಮ ಬಾಬು, ಕುಮಾರ್, ಗಗನ್ ಮೂರ್ತಿ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.

ತಾರಾಗಣದಲ್ಲಿ ರಾಕಿಂಗ್ ಸ್ಟಾರ್ ಯಶ್, ಅನಂತ್ ನಾಗ್, ಶ್ರೀನಿಧಿ ಶೆಟ್ಟಿ, ಮಾಳವಿಕಾ, ಮಾಸ್ಟರ್ ಅನಮೋಲ್, ನಾಗಾಭರಣ, ಗೋವಿಂದೇಗೌಡ, ಅವಿನಾಶ್, ರಾಮ್, ಲಕ್ಕಿ, ಅಯ್ಯಪ್ಪ ಶರ್ಮ ಮುಂತಾದವರಿದ್ದಾರೆ. ಇದಲ್ಲದೆ ಬಾಲಿವುಡ್‍ನ ಸ್ಟಾರ್ ನಟರು ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಕೆಜಿಎಫ್‍ನ ಮುಂದುವರಿದ ಭಾಗವಾಗಿ ಆರಂಭಗೊಳ್ಳಲಿರುವ ಈ ಚಿತ್ರ ಮತ್ತೊಂದು ದಾಖಲೆ ಸೃಷ್ಟಿಸಲು ಮುಂದಾಗಿದೆ ಎಂದೇ ಹೇಳಬಹುದು.

ತಾಂತ್ರಿಕವಾಗಿ ತನ್ನ ಸಾಮಥ್ರ್ಯ ಎಂಥದ್ದು ಎಂದು ಹೇಳಿರುವ ಕೆಜಿಎಫ್ ಚಿತ್ರ ಮತ್ತೊಮ್ಮೆ ಪ್ರೇಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ನೀಡಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಸದ್ಯ ಏಪ್ರಿಲ್‍ನಲ್ಲಿ ಆರಂಭಗೊಳ್ಳುವ ಈ ಚಿತ್ರದ ಚಿತ್ರೀಕರಣದ ಮಾಹಿತಿ ಜತೆಜತೆಗೆ ಹಂತ ಹಂತವಾಗಿ ಚಿತ್ರದ ವಿಚಾರವನ್ನು ತಂಡ ತಿಳಿಸಲಿದೆಯಂತೆ. ಒಟ್ಟಿನಲ್ಲಿ ರಾಕಿಂಗ್‍ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ.

Facebook Comments