ಈ ಬಾರಿ ಕೆ.ಹೆಚ್.ಮುನಿಯಪ್ಪರವರ ರಾಜಕೀಯ ಷಡ್ಯಂತ್ರ ನಡೆಯಲ್ಲ : ಡಿ.ಎಸ್.ವೀರಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಮಾ.14-ಸತತವಾಗಿ ಏಳು ಬಾರಿ ಪಾರ್ಲಿಮೆಂಟ್‍ಗೆ ಆಯ್ಕೆಗೊಂಡಿರುವ ಸಂಸದ ಕೆ.ಹೆಚ್.ಮುನಿಯಪ್ಪರವರ ರಾಜಕೀಯ ಷಡ್ಯಂತ್ರ ಈ ಬಾರಿ ನಡೆಯುವುದಿಲ್ಲ. ಮುನಿಯಪ್ಪ ಎಷ್ಟೇ ಷಡ್ಯಂತರ ನಡೆಸಿದರೂ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದು ಅಸಾಧ್ಯಎಂದು ಬಿಜೆಪಿ ಟಿಕೆಟ್‍ಆಕಾಂಕ್ಷಿ ಹಾಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ತಿಳಿಸಿದರು.

ಶ್ರೀಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೆ.ಹೆಚ್.ಮುನಿಯಪ್ಪ ಏಳು ಬಾರಿ ತಮ್ಮ ರಾಜಕೀಯ ಷಡ್ಯಂತ್ರದ ಮೂಲಕ ಗೆದ್ದಿದ್ದಾರೆ. ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ತಪ್ಪಿಸಿ ಗೆಲುವು ಸಾಧಿಸಿಕೊಂಡು ಬರುತ್ತಿರುವ ಅವರಿಗೆ ಈ ಬಾರಿ ನಡೆಯಲಿರುವ ಚುನಾವಣೆ ದೊಡ್ಡ ಪಾಠವಾಗಲಿದೆ ಎಂದರು.

ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಕೋಲಾರ ಲೋಕಸಭೆಗೆ ಸ್ಪರ್ಧೆ ಮಾಡಿದಾಗ, ಸಂಸದ ಕೆ.ಹೆಚ್.ಮುನಿಯಪ್ಪ ವಿರುದ್ಧ ಕಡಿಮೆ ಅಂತರದಲ್ಲಿ ಪರಭಾವಗೊಂಡಿದ್ದೇನೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ರಾಜಕೀಯ ಷಡ್ಯಂತ್ರ ನಡೆಸಿ ಬಿಜೆಪಿ ಅಭ್ಯರ್ಥಿ ಆಗಬೇಕಿದ್ದ ನನಗೆ ಟಿಕೆಟ್ ತಪ್ಪಿಸಿದರು. ಈ ಬಾರಿಯೂ ಸಹ ತಮಗೆ ಟಿಕೆಟ್‍ತಪ್ಪಿಸಲು ಅದೇ ಷಡ್ಯಂತ್ರ ಸೂತ್ರವನ್ನು ಮುಂದುವರೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಸದ ಕೆ.ಹೆಚ್.ಮುನಿಯಪ್ಪರವರ ವಿರೋಧಿ ಅಲೆ ಮತ್ತು ಪ್ರಧಾನಿ ಮೋದಿ ಪರವಾಗಿ ಎದ್ದೇಳಿರುವ ಬಿಜೆಪಿ ಅಲೆಯಿಂದ ಈ ಬಾರಿ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಕೇಸರಿ ಬಾವುಟ ಹಾರಲಿದೆ. ಕೆ.ಹೆಚ್.ಮುನಿಯಪ್ಪ ಸೋಲುವುದು ಖಚಿತಎಂದು ಭವಿಷ್ಯ ನುಡಿದ ಅವರು, ಬಿಜೆಪಿ ಟಿಕೆಟ್‍ಗೆ ಪ್ರಬಲ ಆಕಾಂಕ್ಷಿಯಾಗಿರುವ ನನಗೆ ಟಿಕೆಟ್ ಸಿಗುತ್ತದೆ ಎಂಬ ತಮ್ಮ ಆತ್ಮ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕ್ಷೇತ್ರದ ಅಭಿವೃದ್ದಿ ಕೆಲಸದಲ್ಲಿ ಸಂಸದ ಕೆ.ಹೆಚ್.ಮುನಿಯಪ್ಪರ ಕೊಡುಗೆ ಶೂನ್ಯವಾಗಿದೆ. ಏಳು ಬಾರಿ ಲೋಕಸಭೆ ಪ್ರವೇಶ ಮಾಡಿರುವ ಅವರು, ಕನಿಷ್ಠ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಣೆಗೊಳಿಸು ನೀರಾವರಿ ಯೋಜನೆ ತರುವಲ್ಲಿ ವಿಫಲರಾಗಿದ್ದಾರೆ.

ಕುತಂತ್ರ ದಿಂದ ಏಳು ಬಾರಿಗೆದ್ದಿರುವ ಕೆ.ಹೆಚ್. ಅವರ ಕುತಂತ್ರ ಈ ಬಾರಿ ನಡೆಯುವುದಿಲ್ಲ. ಕೆ.ಹೆಚ್.ಮುನಿಯಪ್ಪ ಏನು ಎಂಬುದನ್ನು ಎಲ್ಲಾ ಜನರು ಅರ್ಥ ಮಾಡಿಕೊಂಡಿದ್ದಾರೆ. ಈ ಬಾರಿ ನಡೆಯಲಿರುವ ಚುನಾವಣೆಯಲ್ಲಿ ಕೆ.ಹೆಚ್.ಮುನಿಯಪ್ಪರಿಗೆ ಜನತೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ ಎಂದರು.

ರಾಜ್ಯದಲ್ಲಿ 22 ಸ್ಥಾನಗಳು ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕೋಲಾರ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಮಧ್ಯೆ ಯಾವುದೇ ಗೊಂದಲವಿಲ್ಲ. ಏನಾದರೂ ಗೊಂದಲಗಳಿದ್ದರೆ ಪಕ್ಷ ಬಗೆ ಹರಿಸುತ್ತದೆ.ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಭಾಗವಹಿಸಿದ್ದೇನೆ. ಜಿಲ್ಲೆಯ ರಾಜಕೀಯವನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಬರುತ್ತಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

Facebook Comments