ಶಾಕಿಂಗ್ : ಬೆಂಗಳೂರಲ್ಲಿ ಕುಡಿಯುವ ನೀರಿಗೆ ಆಹಾಕಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿ ಜಲ ಬತ್ತಿ ಹೋಗಿದ್ದು , ಭವಿಷ್ಯದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಮುಗಿಲು ಮುಟ್ಟಲಿದೆ. ಜಲ ಮೂಲಗಳು ಕಣ್ಮರೆಯಾದ ಕಾರಣ ಬೋರ್‍ವೆಲ್‍ಗಳು ಬತ್ತಿ ಹೋಗಿದ್ದು ಸಾವಿರಾರು ಅಡಿ ಕೊರೆದರೂ ನೀರು ಸಿಗದಿರುವುದರಿಂದ ಈಗಾಗಲೇ ಹಲವೆಡೆ ನೀರಿಗಾಗಿ ಪರಿತಪಿಸುವಂತಾಗಿದೆ.

ಬಿಬಿಎಂಪಿಗೆ ಸೇರ್ಪಡೆಗೊಂಡಿರುವ 110 ಅಡಿಗಳಿಗೆ ಕಾವೇರಿ ನೀರು ಸರಬರಾಜು ಮಾಡಲು ಇನ್ನೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಭಾಗದ ಜನರಿಗೆ ಟ್ಯಾಂಕರ್‍ಗಳೇ ನೀರಿನ ಆಧಾರ.ಉಳ್ಳವರು ಖಾಸಗಿ ಟ್ಯಾಂಕರ್‍ಗಳ ಮೂಲಕ ನೀರು ತರಿಸಿಕೊಂಡರೆ ಕಡು ಬಡವರು ಪಾಲಿಕೆ ವತಿಯಿಂದ ಸರಬರಾಜು ಮಾಡುವ ನೀರಿಗಾಗಿ ಕಾಯುವುದು ಸರ್ವೇ ಸಾಮಾನ್ಯವಾಗಿದೆ.

ಟ್ಯಾಂಕರ್ ಬರುತ್ತಿದ್ದಂತೆ ವಯಸ್ಸಾದವರು, ಮನೆ, ಮಕ್ಕಳು ಕೊಡ ನೀರಿಗಾಗಿ ಬಿಂದಿಗೆ ಹಿಡಿದು ಬಿರು ಬಿಸಿಲಿನಲ್ಲಿ ನೀರು ತುಂಬಿಸಿಕೊಳ್ಳುವಂತಾಗಿದೆ.
ಕಣ್ಮರೆಯಾದ ಜಲ ಮೂಲ, ಕಲುಷಿತಗೊಂಡ ಕಾಲುವೆಗಳು, ಕೆರೆ-ಕುಂಟೆಗಳು, ಮರಗಳ ಮಾರಣ ಹೋಮ ಮತ್ತಿತರ ಕಾರಣಗಳಿಂದ ಅಂತರ್ಜಲ ಮಟ್ಟ ಕುಸಿದು ಹೋಗಿದ್ದು , ಬೋರ್‍ವೆಲ್‍ಗಳು ಬತ್ತಿ ಹೋಗಿವೆ.

ಅಪಾರ್ಟ್‍ಮೆಂಟ್‍ಗಳಲ್ಲಿ ಅಳವಡಿಸಲಾಗಿದ್ದ ಬೋರ್‍ವೆಲ್‍ಗಳಲ್ಲಿ ನೀರು ಬಾರದೆ ಅಲ್ಲಿನ ನಿವಾಸಿಗಳು ಟ್ಯಾಂಕರ್‍ಗಳಿಗೆ ಮೊರೆ ಹೋಗುವಂತಹ ಸನ್ನಿವೇಶ ಎದುರಾಗಿದೆ. ಜನಸಂಖ್ಯೆ ಒತ್ತಡ ಮತ್ತಿತರ ಕಾರಣಗಳಿಂದ ಬೆಂಗಳೂರಿನ ನೆಲ ಬತ್ತಿ ಹೋಗಿದ್ದು ಸಂಬಂಧಪಟ್ಟ ಇಲಾಖೆಗಳು ನೀರಿನ ಹಾಹಾಕಾರ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದರೆ 2023ರ ವೇಳೆಗೆ ಬೆಂಗಳೂರು ದಕ್ಷಿಣ ಆಫ್ರಿಕಾದ ಕೇಪ್‍ಟೌನ್ ಮಾದರಿ ಬತ್ತಿ ಹೋಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಭವಿಷ್ಯದಲ್ಲಿ ಎದುರಾಗುವ ನೀರಿನ ಸಮಸ್ಯೆ ಬಗೆಹರಿಸಲು ಜಲಮಂಡಳಿ ಮತ್ತು ಬಿಬಿಎಂಪಿಯವರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಆದರೂ ನೀರು ಕಾಪಾಡಿಕೊಳ್ಳುವ ಕಾರ್ಯದಲ್ಲಿ ನಾಗರಿಕರು ಕೈಜೋಡಿಸಬೇಕಾದ ಅಗತ್ಯತೆ ಇದೆ.

ಅಮೃತಕ್ಕೆ ಸಮಾನವಾದ ನೀರು ಸಂರಕ್ಷಣೆ ಹಾಗೂ ಮಳೆ ನೀರು ಕೊಯ್ಲು ಅಗತ್ಯದ ಬಗ್ಗೆ ಅರಿವು ಮೂಡಿಸಿಕೊಂಡು ಈ ನಿಟ್ಟಿನತ್ತ ಗಮನ ಹರಿಸಬೇಕಾದ್ದುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ.

Facebook Comments