3,500 ಕೋಟಿ ಸಂಧಾನ ಹಣ ಹೇಗೆ ಹೊಂದಿಸುತ್ತೀರಿ..? ಸಿಂಗ್ ಸೋದರರಿಗೆ ಸುಪ್ರೀಂ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮಾ.14- ಕಂಪನಿಯ ಷೇರು ಹಂಚಿಕೆ ವಾಗ್ದಾನ ನೆರವೇರಿಸಲು ವಿಫಲರಾಗಿ ಕಾನೂನು ಕುಣಿಕೆಯಲ್ಲಿ ಸಿಲುಕಿರುವ ಪ್ರತಿಷ್ಠಿತ ಔಷಧಿ ತಯಾರಿಕೆ ಸಂಸ್ಥೆ ರ್ಯಾನ್‍ಬಾಕ್ಸಿಯ ಮಾಜಿ ಪ್ರವರ್ತಕರಾದ ಮಲ್ವಿಂದರ್ ಸಿಂಗ್ ಮತ್ತು ಶಿವಿಂದರ್ ಸಿಂಗ್ ಇಂದು ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಖುದ್ದಾಗಿ ಹಾಜರಾದರು.

ಈ ಪ್ರಕರಣದಲ್ಲಿ ಸಿಂಗಪುರ್ ನ್ಯಾಯಮಂಡಳಿಯೊಂದು ಆದೇಶಿಸಿರುವ 3,500 ಕೋಟಿ ರೂ.ಗಳ ಸಂಧಾನ (ಮಧ್ಯಸ್ಥಿಕೆ) ಹಣವನ್ನು ಹೇಗೆ ಹೊಂದಿಸುತ್ತೀರಿ ಮತ್ತು ನ್ಯಾಯಾಧೀಕರಣದ ಆದೇಶವನ್ನು ಕಟ್ಟುನಿಟ್ಟಾಗಿ ಹೇಗೆ ಪಾಲಿಸುತ್ತೀರಿ ಎಂಬ ಬಗ್ಗೆ ತನಗೆ ವಿವರಿಸುವಂತೆ ಸುಪ್ರೀಂಕೋರ್ಟ್ ಸಿಂಗ್ ಸಹೋದರರಿಗೆ ಸೂಚನೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠವು ಈ ಸಂಬಂಧ ಸಿಂಗ್ ಬ್ರದರ್ಸ್‍ಗೆ ಕೆಲವು ಪ್ರಶ್ನೆಗಳನ್ನು ಕೇಳಿ ಅದಕ್ಕೆ ಸಮರ್ಪಕ ಉತ್ತರ ಬಯಸಿ ಕಾಲಾವಕಾಶ ನೀಡಿತು.

ನ್ಯಾಯಮಂಡಳಿ ಆದೇಶವನ್ನು ಯಥಾವತ್ ಪಾಲಿಸುವ ಬಗ್ಗೆ ತಮ್ಮ ಹಣಕಾಸು ಮತ್ತು ಕಾನೂನು ಸಲಹೆಗಾರರನ್ನು ಸಂಪರ್ಕಿಸಿ 3,500 ಕೋಟಿ ರೂ.ಗಳ ಸಂಧಾನ ಹಣವನ್ನು ಹೊಂದಿಸಲು ಹೇಗೆ ಸಾಧ್ಯ ಎಂಬ ಬಗ್ಗೆ ತನಗೆ ಸಂಪೂರ್ಣ ವಿವರ ನೀಡುವಂತೆ ಪೀಠ ಆದೇಶಿಸಿದೆ.

ಭಾರತದ ಪ್ರತಿಷ್ಟಿತ ಆರೋಗ್ಯ ಆರೈಕೆ ಸಂಸ್ಥೆಯಾದ ಪೋರ್ಟಿಸ್ ಹೆಲ್ತ್ ಕೇರ್ ಮತ್ತು ಮಲೇಷ್ಯಾದ ಐಎಚ್‍ಎಚ್ ಹೆಲ್ತ್ ಕೇರ್ ಸಂಸ್ಥೆಯಲ್ಲಿನ ಷೇರು ವಹಿವಾಟುಗಳಿಗೆ ಸಂಬಂಧಿಸಿದ ವಾಗ್ದಾನ ಈಡೇರಿಸಲು ರ್ಯಾನ್‍ಬಾಕ್ಸಿ ಸಂಸ್ಥೆಯ ಮಾಜಿ ಪ್ರವರ್ತಕರು ವಿಫಲರಾದ ಪ್ರಕರಣ ಇದಾಗಿದೆ.

ಈ ಸಂಬಂಧ ಪ್ರತಿವಾದಿಗಳು ಮತ್ತು ಪ್ರತ್ಯರ್ಜಿದಾರರು ಸಿಂಗಪುರ್ ನ್ಯಾಯ ಮಂಡಳಿಯ ಮೆಟ್ಟಿಲೇರಿದ್ದರು. ಈ ಪ್ರಕರಣವು ಸುಪ್ರೀಂಕೋರ್ಟ್‍ನಲ್ಲೂ ವಿಚಾಣೆ ನಡೆಯುತ್ತಿದೆ.

Facebook Comments