‘ಕೈ’ತಪ್ಪಿದ ತುಮಕೂರು, ‘ನಾನು ಸುಮ್ಮನಿರಲ್ಲ’ ಎಂದ ಮುದ್ದಹನುಮೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15-ತುಮಕೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು, ಹೈಕಮಾಂಡ್ ತೀರ್ಮನಕ್ಕೆ ಬದ್ಧ ಎಂದು ಹೇಳಿ ಸುಮ್ಮನಾಗುವುದಿಲ್ಲ.

ಶೀಘ್ರದಲ್ಲೇ ಪತ್ರಿಕಾಗೋಷ್ಠಿ ಕರೆದು ನನ್ನ ತೀರ್ಮಾನ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.
ಜೆ.ಪಿ.ನಗರದಲ್ಲಿರುವ ಸಾಹಿತಿ ಬರಗೂರುರಾಮಚಂದ್ರಪ್ಪ ಅವರ ಮನೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ತೆರಳಿದ್ದ ಮುದ್ದಹನುಮೇಗೌಡರು ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇವರು ನನ್ನ ಪರವಾಗಿದ್ದಾನೆ. ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ. ತುಮಕೂರು ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಬಗ್ಗೆ ಸದ್ಯಕ್ಕೆ ಮಾತನಾಡಬಾರದು ಎಂದು ನಿರ್ಧರಿಸಿದ್ದೇನೆ. ಹೈಕಮಾಂಡ್ ಜತೆ ಚರ್ಚೆ ಮುಂದುವರೆಸಿದ್ದು, ಎಲ್ಲಾ ಪ್ರಯತ್ನಗಳು ಮುಗಿದ ಬಳಿಕ ಪತ್ರಿಕಾಗೋಷ್ಠಿ ಕರೆದು ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.

ತುಮಕೂರು ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಗೆದಿದ್ದು, ಅದನ್ನು ಜೆಡಿಎಸ್‍ಗೆ ಏಕೆ ಬಿಟ್ಟುಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ದೇವೇಗೌಡರು ತುಮಕೂರು ಕ್ಷೇತ್ರಕ್ಕಾಗಿ ಹಠ ಹಿಡಿದು ಕುಳಿತಿದ್ದರು ಎಂಬುದೂ ನನಗೆ ತಿಳಿದಿಲ್ಲ.

ನಾನು ದೇವೇಗೌಡರ ಜತೆಯೂ ಮಾತನಾಡುತ್ತೇನೆ. ಕಾಂಗ್ರೆಸ್ ಹೈಕಮಾಂಡ್ ಜತೆಯೂ ಮಾತನಾಡುತ್ತೇನೆ. ಎಲ್ಲಾ ಮುಗಿದ ಬಳಿಕ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸದ್ಯಕ್ಕೆ ಅಂತಹ ನಿರ್ಧಾರ ಮಾಡಿಲ್ಲ ಎಂದು ತಿಳಿಸಿದರು.

Facebook Comments

Sri Raghav

Admin