ತುಮಕೂರನ್ನು ಬಿಟ್ಟುಕೊಡುವಂತೆ ಜೆಡಿಎಸ್’ಗೆ ಕಾಂಗ್ರೆಸ್‍ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15-ಹಾಲಿ ಸಂಸದರಿರುವ ತುಮಕೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಜೆಡಿಎಸ್ ವರಿಷ್ಠರಿಗೆ ಮನವಿ ಮಾಡುತ್ತಿರುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಮುದ್ದಹನುಮೇಗೌಡರೊಂದಿಗೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿ ಸಂಸದರಿರುವ 10 ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಕೇಳಲಾಗಿದ್ದು, ಅದನ್ನು ಹೈಕಮಾಂಡ್‍ಗೂ ಸ್ಪಷ್ಟವಾಗಿ ಹೇಳಿದ್ದೆವು.

ಹೈಕಮಾಂಡ್ ಸಹ ಎಲ್ಲರ ಅಭಿಪ್ರಾಯ ಪಡೆದುಕೊಂಡಿತ್ತು. ನಂತರ ದೇವೇಗೌಡರ ನಡುವೆ ಮಾತುಕತೆ ನಡೆದಿದೆ. ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ.

ಆ ರೀತಿ ಏಕೆ ಆಯಿತು ಗೊತ್ತಿಲ್ಲ. ನಾವು ಈಗ ಮತ್ತೆ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡುವಂತೆ ಕೇಳುತ್ತಿದ್ದೇವೆ. ಈಗಾಗಲೇ ದೇವೇಗೌಡರನ್ನು ಭೇಟಿ ಮಾಡಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.

ನಾವು ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇವೆ. ಆದರೆ ತುಮಕೂರಿನಲ್ಲಿ ಮುದ್ದಹನುಮೇಗೌಡರು ಸಂಸದರಾಗಿ ಒಳ್ಳೆ ಕೆಲಸ ಮಾಡಿದ್ದರು. ಜನರ ವಿಶ್ವಾಸ ಗಳಿಸಿದ್ದಾರೆ. ನಮಗೆ ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಮತ್ತೆ ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿರುವುದಾಗಿ ಹೇಳಿದರು.

ಮೈಸೂರು-ತುಮಕೂರು ಕ್ಷೇತ್ರಗಳ ಹಂಚಿಕೆಯಲ್ಲಿ ಯಾವುದೇ ಪೈಪೋಟಿ ಇರಲಿಲ್ಲ. ತುಮಕೂರು ಬಿಟ್ಟುಕೊಟ್ಟಿರುವುದಕ್ಕೂ ಮೈಸೂರನ್ನು ಉಳಿಸಿಕೊಂಡಿರುವುದಕ್ಕೂ ಸಂಬಂಧವಿಲ್ಲ. ಚರ್ಚೆಯ ಹಂತದಲ್ಲಿ ಹಲವಾರು ಬದಲಾವಣೆಗಳಾಗಿವೆ.

ಜೆಡಿಎಸ್ ಆರಂಭದಲ್ಲಿ 12 ಸ್ಥಾನ ಕೇಳಿತ್ತು. ಆನಂತರ 10 ಸ್ಥಾನಗಳಿಗೆ ಬಂದಿತ್ತು.ನಂತರ 8ಕ್ಕೆ ತೀರ್ಮಾನವಾಯಿತು. ಹೀಗೆ ಹಂತ ಹಂತವಾಗಿ ಹಲವಾರು ಬದಲಾವಣೆಗಳಾಗಿವೆ. ತುಮಕೂರು ಕಳೆದುಕೊಂಡು ಮೈಸೂರು ಉಳಿಸಿಕೊಂಡಿದ್ದೇವೆ ಎಂಬ ಅಭಿಪ್ರಾಯ ಸರಿಯಲ್ಲ.

ಕಾಂಗ್ರೆಸ್ ಸಂಸದರ 10 ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡಬೇಕೆಂದು ಆರಂಭದಲ್ಲೇ ತೀರ್ಮಾನವಾಗಿತ್ತು. ವಸ್ತು ಸ್ಥಿತಿ ಆಧರಿಸಿ ಅದನ್ನು ಪಾಲಿಸಬೇಕು. ನಾಮಪತ್ರ ಸಲ್ಲಿಕೆಗೆ ಸಮಯವಿದೆ. ಜೆಡಿಎಸ್ ಕೂಡ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ.

ನಾವು ಪ್ರಯತ್ನ ಮುಂದುವರೆಸಿದ್ದೇವೆ. ಜೆಡಿಎಸ್ ನಾಯಕರನ್ನು ಭೇಟಿ ಮಾಡಿ ಮನವೊಲಿಸಲಿದ್ದೇವೆ ಎಂದರು. ತುಮಕೂರು ಬಿಟ್ಟುಕೊಟ್ಟಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.

ಪ್ರಚಾರದ ವೇಳೆ ತಟಸ್ಥರಾಗಿರುತ್ತಾರೆ ಎಂಬುದು ಸರಿಯಲ್ಲ. ಹೈಕಮಾಂಡ್ ನಿರ್ಧಾರವನ್ನು ಗೌರವಿಸುತ್ತೇವೆ. ಕೊನೆ ಕ್ಷಣದವರೆಗೂ ಮನವೊಲಿಸುವ ಪ್ರಯತ್ನ ಮುಂದುವರೆಸುತ್ತೇವೆ ಎಂದು ತಿಳಿಸಿದರು.

ಬರಗೂರು ರಾಮಚಂದ್ರಪ್ಪ ಅವರ ಭೇಟಿ ವೇಳೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ತಾವು ಬರೆದ ರಾಜಕುಮಾರ ಜೀವನ ಚರಿತ್ರೆ ಪುಸ್ತಕ ನೀಡಿದರು.  ಸಂಸದ ಮುದ್ದಹನುಮೇಗೌಡ ಉಪಸ್ಥಿತರಿದ್ದರು.

Facebook Comments

Sri Raghav

Admin