ದೋಸ್ತಿಗಳು ಸೀಟು ಹಂಚಿಕೊಂಡ ಬೆನ್ನಲ್ಲೇ ಕೆಲವು ಕ್ಷೇತ್ರಗಳಲ್ಲಿ ಭುಗಿಲೆದ್ದ ಅಸಮಾಧಾನ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.15- ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸೀಟು ಹಂಚಿಕೆ ಬೆನ್ನಲ್ಲೇ ಅಸಮಾಧಾನಗಳು ಭುಗಿಲೆದ್ದಿದ್ದು, ತುಮಕೂರು, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ವಿಜಯಪುರ ಕ್ಷೇತ್ರಗಳ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಸರ್ಕಾರದಲ್ಲಿ ದೋಸ್ತಿಗಳಾಗಿರುವ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಲೋಕಸಭೆ ಚುನಾವಣೆಗೂ ಮೈತ್ರಿ ಮಾಡಿಕೊಂಡಿದ್ದು, 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷ ಜೆಡಿಎಸ್‍ಗೆ ಹಾಸನ, ಮಂಡ್ಯ, ಶಿವಮೊಗ್ಗ, ಉಡುಪಿ-ಚಿಕ್ಕಮಗಳೂರು, ಬೆಂಗಳೂರು ಉತ್ತರ, ಉತ್ತರ ಕನ್ನಡ, ವಿಜಯಪುರ, ತುಮಕೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ.

ಆದರೆ, ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಬಿಟ್ಟು ಕೊಟ್ಟ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಸಮಾಧಾನ ಮಡುಗಟ್ಟಿದ ಜ್ವಾಲಾಮುಖಿಯಂತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಟ್ಟುಕೊಟ್ಟಿದ್ದಕ್ಕಾಗಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆಯೇ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡ ಕ್ಷೇತ್ರದಲ್ಲಿ ಜೆಡಿಎಸ್‍ಗೆ ನೆಲೆಯೇ ಇಲ್ಲ. ನಮ್ಮ ಸರ್ಕಾರ ಇದ್ದುಕೊಂಡು ಆರ್.ವಿ.ದೇಶಪಾಂಡೆಯಂತಹ ಪ್ರಭಾವಿ ಮಂತ್ರಿಯಿದ್ದು, ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ನಮ್ಮ ಪಕ್ಷದ ಹತಾಶೆಯ ಮನಸ್ಥಿತಿ ಕಾರಣ ಎಂದು ಕಾಂಗ್ರೆಸ್ ಮುಖಂಡರು ಅಸಮಾಧಾನ ಹೊರ ಹಾಕುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್‍ನ ಒಬ್ಬ ಶಾಸಕರಿದ್ದಾರೆ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ಹೆಚ್ಚು  ಬಲಿಷ್ಠವಾಗಿದೆ. ಶಿವರಾಜ್ ತಂಗಡಗಿ, ರಾಜು ಹಲಗೂರು, ಪ್ರಕಾಶ್ ರಾಥೋಡ್, ಕಾಂತಾನಾಯಕ್ ಸೇರಿದಂತೆ ಘಟಾನುಘಟಿ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು.

ಜೆಡಿಎಸ್‍ಗೆ ಅಲ್ಲಲ್ಲಿ ಅಭ್ಯರ್ಥಿಗಳೇ ಇಲ್ಲ. ಹಾಗಿದ್ದೂ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದು ಯಾವ ಪುರುಷಾರ್ಥಕ್ಕೆ ಎಂಬ ಆಕ್ರೋಶದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಮೈತ್ರಿಯಿಂದಾಗಿ ಜೆಡಿಎಸ್‍ಗಿಂತಲೂ ಕಾಂಗ್ರೆಸ್‍ಗೆ ಹೆಚ್ಚು ನಷ್ಟವಾಗಲಿದೆ ಎಂಬ ಅನುಮಾನಗಳು ಲೋಕಸಭೆ ಸೀಟು ಹಂಚಿಕೆಯಿಂದ ಮತ್ತೊಮ್ಮೆ ಖಚಿತವಾಗಿದೆ.

ಹಾಸನ, ಮಂಡ್ಯ ಕ್ಷೇತ್ರಗಳಲ್ಲಿ ಜೆಡಿಎಸ್ ಸಂಸದರಿದ್ದರು. ಅದನ್ನು ಬಿಟ್ಟುಕೊಟ್ಟಿರುವುದರಲ್ಲಿ ಅರ್ಥವಿದೆ. ಉಪ ಚುನಾವಣೆ ವೇಳೆ ಶಿವಮೊಗ್ಗ ಕ್ಷೇತ್ರವನ್ನು ಬಿಟ್ಟುಕೊಡಲಾಗಿತ್ತು. ಅದನ್ನು ಸಹಿಸಿಕೊಳ್ಳಬಹುದು.

ಬೆಂಗಳೂರು ಉತ್ತರ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಲಾಜಿಕ್ ಕೂಡ ಸರಿಯಿಲ್ಲ. ಒಕ್ಕಲಿಗ ಮತಗಳು ಹೆಚ್ಚಿವೆ ಎಂಬ ಕಾರಣಕ್ಕಾಗಿ ಆ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿರುವುದರಿಂದ  ಕಾಂಗ್ರೆಸ್‍ಗೆ ಮುಂದಿನ ದಿನಗಳಲ್ಲಿ ಭಾರೀ ಹಿನ್ನಡೆ ಉಂಟಾಗಲಿದೆ ಎನ್ನಲಾಗಿದೆ.

ಸಂಖ್ಯೆಗಳ ಆಧಾರದ ಮೇಲೆ ಕ್ಷೇತ್ರಗಳನ್ನು ಬಿಟ್ಟುಕೊಡುವುದೇ ಆಗಿದ್ದರೆ ಕಾಂಗ್ರೆಸ್ ಅಭ್ಯರ್ಥಿಗಳ ಕೊರತೆಯನ್ನು ಎದುರಿಸುತ್ತಿರುವ ಬೆಂಗಳೂರು ದಕ್ಷಿಣ, ಬೆಳಗಾವಿ ಕ್ಷೇತ್ರಗಳನ್ನು ಬಿಟ್ಟುಕೊಡಬಹುದಿತ್ತು.

ಒಂದು ವೇಳೆ ಹುಬ್ಬಳ್ಳಿ-ಧಾರವಾಡ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದರೂ ಚಿಂತೆ ಇರಲಿಲ್ಲ. ಆದರೆ, ಕಾಂಗ್ರೆಸ್ ಭದ್ರ ನೆಲೆಯಿರುವ ಪ್ರಮುಖ ಕ್ಷೇತ್ರಗಳನ್ನು ಬಿಟ್ಟುಕೊಡುವ ಮೂಲಕ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಮುಖಂಡರಿಗೆ ಅಪಮಾನ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕೆಲವೊಮ್ಮೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾವೇ ಅಂತಿಮ ಎಂಬ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ರಾಜ್ಯ ನಾಯಕರನ್ನು ಕಡೆಗಣಿಸಿ ಮನಸೋಇಚ್ಚೆ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪಕ್ಷದ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದಾರೆ.

ಜೆಡಿಎಸ್ ಆರು ಸ್ಥಾನಗಳಿಗೆ ಸಮಾಧಾನಗೊಳ್ಳಲು ಸಿದ್ಧವಿತ್ತು. ಆದರೆ, ಹೆಚ್ಚುವರಿಯಾಗಿ ಎರಡು ಸ್ಥಾನಗಳನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಬಿಟ್ಟುಕೊಡುವುದರಲ್ಲೂ ಸ್ಥಳೀಯ ರಾಜಕಾರಣವನ್ನು ಅರ್ಥ ಮಾಡಿಕೊಳ್ಳದೆ ಜೆಡಿಎಸ್ ಮುಖಂಡರ ತಾಳಕ್ಕೆ ಜೈ ಎಂದಿರುವುದು ಸರಿಯಲ್ಲ ಎಂಬ ಆಕ್ಷೇಪಗಳು ಕೇಳಿ ಬರುತ್ತಿವೆ.

ಈಗಾಗಲೇ ಬಿಟ್ಟುಕೊಟ್ಟಿರುವ ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ನಾಯಕರು ತಮ್ಮ ಪ್ರಯತ್ನಗಳನ್ನು ಆರಂಭಿಸಿದ್ದಾರೆ. ಆದರೆ, ಅದು ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin